ಹೈದರಾಬಾದ್, ಮೇ 21 (DaijiworldNews/DB): ಅನ್ಯಜಾತಿಯ ಯುವತಿಯನ್ನು ವರಿಸಿದ್ದ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹೈದರಾಬಾದ್ನ ಬೇಗುಂ ಬಜಾರ್ನಲ್ಲಿ ನಡೆದಿದೆ.
ಕೊಲೆಯಾದ ಯುವಕನನ್ನು ನೀರಜ್ ಪನ್ವಾರ್ (21) ಎಂದು ಗುರುತಿಸಲಾಗಿದೆ. ಘಟನೆ ಶುಕ್ರವಾರ ರಾತ್ರಿ 7.30ರ ಸುಮಾರಿಗೆ ನಡೆದಿದ್ದು, ಐವರ ಗ್ಯಾಂಗ್ ನಡು ರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಇರಿದಿದ್ದಾರೆ. ಯುವಕನ ತಲೆ, ಎದೆ ಹಾಗೂ ಇತರ ಭಾಗಗಳಿಗೆ ಇರಿದು ಕೊಂದಿದ್ದಾರೆ. ಶಾಹಿನಾಯತ್ಗುಂಜ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬೇಗುಂ ಬಜಾರ್ನಲ್ಲಿ ಅಂಗಡಿ ಹೊಂದಿರುವ ಈತ ಯುವತಿಯ ಮನೆಯವರ ಆಕ್ಷೇಪದ ನಡುವೆಯೂ ಅನ್ಯ ಜಾತಿಯ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ದಂಪತಿಗೆ ಎರಡೂವರೆ ತಿಂಗಳ ಮಗುವಿದೆ. ಯುವತಿಯ ಕುಟುಂಬದವರೇ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ನೀರಜ್ ತಂದೆ ಮಾತನಾಡಿ, ಮದುವೆಯಾದಂದಿನಿಂದಲೇ ಆತನಿಗೆ ಸಾಕಷ್ಟು ಬೆದರಿಕೆ ಕರೆಗಳು ಬರುತ್ತಿದ್ದವು. ಪ್ರೇಮ ವಿವಾಹವಾಗಿದ್ದಕ್ಕೆ ಆತನನ್ನು ದುಷ್ಕರ್ಮಿಗಳು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ.