ಧಾರವಾಡ, ಮೇ 21 (DaijiworldNews/DB): ನಿಶ್ಚಿತಾರ್ಥ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಮರಕ್ಕೆ ಕ್ರೂಸರ್ ಢಿಕ್ಕಿ ಹೊಡೆದು ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಧಾರವಾಡದಲ್ಲಿ ನಡೆದಿದೆ. 13 ಮಂದಿ ಗಾಯಗೊಂಡಿದ್ದಾರೆ.
ಧಾರವಾಡ ತಾಲೂಕಿನ ಬಾಡ ಗ್ರಾಮದ ಬಳಿ ತಡರಾತ್ರಿ ಸುಮಾರು ಒಂದು ಗಂಟೆಗೆ ಘಟನೆ ನಡೆದಿದೆ. ಮೃತರನ್ನು ಅನನ್ಯಾ ( 14), ಹರೀಶ (13 ), ಶಿಲ್ಪಾ(34 ), ನೀಲವ್ವ (60), ಮಧುಶ್ರೀ (20), ಮಹೇಶ್ವರಯ್ಯ (11 ) ಹಾಗೂ ಶಂಭುಲಿಂಗಯ್ಯ (35 )ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಧಾರವಾಡ ತಾಲೂಕಿನ ಬೆನಕಟ್ಟಿ ಗ್ರಾಮದವರು ಎನ್ನಲಾಗಿದೆ. ಗಾಯಗೊಂಡ13 ಮಂದಿಯನ್ನು ಜಿಲ್ಲಾಸ್ಪತ್ರೆ ಹಾಗೂ ಕಿಮ್ಸ್ಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ.
ಮನ್ಸೂರ ರೇವಣಸಿದ್ದೇಶ್ವರ ಮಠದಲ್ಲಿಇಂದು ನಡೆಯಲಿದ್ದ ನಿಗದಿ ಗ್ರಾಮದ ಯುವಕನ ಮದುವೆಯ ವೀಳ್ಯಶಾಸ್ತ್ರ ಮುಗಿಸಿಕೊಂಡು ಬರುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಎಲ್ಲರೂ ಇಂದು ಮದುವೆಯಲ್ಲಿ ಪಾಲ್ಗೊಳ್ಳುವ ತಯಾರಿಯಲ್ಲಿದ್ದರು.
ಕ್ರೂಸರ್ ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎನ್ನಲಾಗುತ್ತಿದೆ. ನಿಧಾನವಾಗಿ ಚಾಲನೆ ಮಾಡುವಂತೆ ಕ್ರೂಸರ್ನಲ್ಲಿದ್ದವರು ಹೇಳಿದರೂ ಕೇಳದ ಚಾಲಕ ಅತಿ ವೇಗದ ಚಾಲನೆ ಮಾಡಿರುವುದೇ ಘಟನೆಗೆ ಕಾರಣ ಎಂದು ಗಾಯಾಳುಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಪಿ. ಕೃಷ್ಣಕಾಂತ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಚ್ಚಿನ ತನಿಖೆ ನಡೆಯುತ್ತಿದೆ.