ಲಕ್ನೋ, ಮೇ 21 (DaijiworldNews/HR): ಲಕ್ನೋದಲ್ಲಿ ಯುವತಿಯೊಬ್ಬಳು ತನ್ನ ತಾಯಿಯ ಶವದೊಂದಿಗೆ 10 ದಿನಗಳಿಂದ ಮನೆಯಲ್ಲೆಯೇ ವಾಸಿಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.
ಸಾಂದರ್ಭಿಕ ಚಿತ್ರ
ಯುವತಿಯನ್ನು ಅಂಕಿತಾ ದೀಕ್ಷಿತ್ ( 26) ಎಂದು ಗುರುತಿಸಲಾಗಿದ್ದು, ಆಕೆಯ ತಾಯಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಿಂದ ನಿವೃತ್ತಿಯಾಗಿರುವ ಸುನೀತಾ ದೀಕ್ಷಿತ್ ಮೃತಪಟ್ಟಿರುವವರಾಗಿದ್ದಾರೆ.
ತಾಯಿ ಮೃತಪಟ್ಟಿರುವ ಕುರಿತು ಯುವತಿ ತನ್ನ ಕುಟುಂಬದ ಯಾವುದೇ ಸದಸ್ಯರಿಗಾಗಲಿ, ಪೊಲೀಸರಿಗಾಗಲಿ ತಿಳಿಸಿರಲಿಲ್ಲ. ಮನೆಯಿಂದ ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ.
ಇನ್ನು ಪೊಲೀಸರು ಪರಿಶೀಲಿಸಿದಾಗ ಬಾಗಿಲಿಗೆ ಬೀಗ ಹಾಕಿದ್ದು, ಯುವತಿಯ ಧ್ವನಿಯನ್ನು ಕೇಳಿ ಬಾಗಿಲು ತೆರೆಯುವಂತೆ ಹೇಳಿದ್ದಾರೆ. ಆದರೆ ಯುವತಿ ಬಾಗಿಲು ತೆಗೆಯದಿದ್ದಾಗ ಪೊಲೀಸರು ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದ್ದರು. ಯುವತಿ ಅಂಕಿತಾ ಮಾನಸಿಕ ಸ್ಥಿತಿ ಚೆನ್ನಾಗಿಲ್ಲ. ಆಕೆ ಹೆಚ್ಚು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಬಳಿಕ ಲಕ್ನೋ ಪೊಲೀಸರು ಸುನೀತಾ ದೀಕ್ಷಿತ್ ಅವರ ಮೃತದೇಹವನ್ನು ಹೊರ ತೆಗೆದಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಅದರ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಸುನೀತಾ ಕಳೆದ 10 ವರ್ಷಗಳ ಹಿಂದೆ ಪತಿ ರಜನೀಶ್ ದೀಕ್ಷಿತ್ಗೆ ವಿಚ್ಛೇದನ ನೀಡಿದ್ದು, ತಮ್ಮ ಮಗಳಯೊಂದಿಗೆ ಒಂಟಿಯಾಗಿ ಜೀವನ ನಡೆಸುತ್ತಿದ್ದರು ಎನ್ನಲಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ