ನವದೆಹಲಿ, ಮೇ 20 (DaijiworldNews/SM): ದೇಶದೆಲ್ಲೆಡೆ ಸಾಕಷ್ಟು ಚರ್ಚೆ, ವಿವಾದಕ್ಕೆ ಕಾರಣವಾಗಿರುವ ಗ್ಯಾನ್ ವಾಪಿ ಮಸೀದಿ ವಿವಾದದ ಪ್ರಕರಣವನ್ನು ವಾರಣಾಸಿ ಸಿವಿಲ್ ಕೋರ್ಟ್ ನಿಂದ ಜಿಲ್ಲಾ ಕೋರ್ಟ್ ನ್ಯಾಯಾಧೀಶರಿಗೆ ವರ್ಗಾವಣೆ ಮಾಡಿ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಪ್ರಕರಣದ ಸೂಕ್ಷ್ಮತೆಯನ್ನು ಆಧರಿಸಿ ಈ ಪ್ರಕರಣವನ್ನು ಅನುಭವಿ ನ್ಯಾಯಾಧೀಶರಿಗೆ ವರ್ಗಾಯಿಸಲಾಗಿದೆ. ಉತ್ತರ ಪ್ರದೇಶ ಉನ್ನತ ನ್ಯಾಯಾಂಗ ಸೇವೆ ಹಿರಿಯ ಹಾಗೂ ಅನುಭವಿ ನ್ಯಾಯಾಂಗದ ಅಧಿಕಾರಿ ಪ್ರಕರಣವನ್ನು ಪರಿಶೀಲಿಸಲಿದ್ದಾರೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ನ್ಯಾ. ಡಿ.ವೈ ಚಂದ್ರಚೂಡ್, ನ್ಯಾ. ಸೂರ್ಯಕಾಂತ್ ಹಾಗೂ ಪಿ.ಎಸ್ ನರಸಿಂಹ ಅವರು ಈ ಆದೇಶ ನೀಡಿದ್ದಾರೆ. ಈ ನಡುವೆ ಮೇ 17ರ ಮಧ್ಯಂತರ ಆದೇಶವೇ ಸದ್ಯ ಮುಂದುವರೆಯಲಿದೆ ಎಂದು ಸುಪ್ರೀಂ ತಿಳಿಸಿದೆ.