ನವದೆಹಲಿ, ಮೇ 20 (DaijiworldNews/DB): ಸ್ವಂತ ಮಗಳು ಶೀನಾ ಬೋರಾಳನ್ನು ಹತ್ಯೆ ಮಾಡಿದ ಆರೋಪಿ ಇಂದ್ರಾಣಿ ಮುಖರ್ಜಿ ಸದ್ಯ ಜೈಲಿನಿಂದ ಹೊರ ಬಂದಿದ್ದಾಳೆ.
ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಶೀನಾ ಬೋರಾ ಹತ್ಯಾ ಪ್ರಕರಣದಲ್ಲಿ ಶೀನಾಳ ತಾಯಿ ಇಂದ್ರಾಣಿ ಮುಖರ್ಜಿಯೇ ಆರೋಪಿ ಎಂಬುದು ಗೊತ್ತಾದ ಬಳಿಕ 2015ರಲ್ಲಿ ಆಕೆಯ ಬಂಧನವಾಗಿತ್ತು.
2012ರಲ್ಲಿ ಪ್ರಕರಣ ನಡೆದಿದ್ದರೂ, ಅದನ್ನು ಮುಚ್ಚಿ ಹಾಕಲಾಗಿತ್ತು. ಬಳಿಕ 2015ರಲ್ಲಿ ತಾಯಿಯೇ ಹತ್ಯೆ ಮಾಡಿರುವುದು ಗೊತ್ತಾಗಿತ್ತು. ಹೀಗಾಗಿ ಆಕೆಯನ್ನು ಬಂಧಿಸಲಾಗಿತ್ತು. ಕಳೆದ ಆರೂವರೆ ವರ್ಷಗಳಿಂದ ಜೈಲುವಾಸ ಅನುಭವಿಸಿದ್ದ ಆರೋಪಿಗೆ ಗುರುವಾರವಷ್ಟೇ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಗುರುವಾರ ಜೈಲಿನಿಂದ ಆಕೆಯನ್ನು ಬಿಡುಗಡೆ ಮಾಡದೆ ಶುಕ್ರವಾರ ಬಿಡುಗಡೆಗೊಳಿಸಲಾಗಿದೆ.
ಜಾಮೀನು ಕೋರಿ ಆಕೆ ಸಲ್ಲಿಸಿದ್ದ ಅರ್ಜಿಯನ್ನು ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್ ನಿರಾಕರಿಸಿತ್ತು. ಆದರೆ ಆರೂವರೆ ವರ್ಷಗಳಿಂದ ಜೈಲಿನಲ್ಲಿರುವ ಆಕೆಗೆ ಜಾಮೀನು ನೀಡಬೇಕೆಂದು ಕೋರಿ ಆಕೆ ಪರ ವಕೀಲರು ವಾದ ಮಂಡಿಸಿದ್ದ ಹಿನ್ನೆಲೆಯಲ್ಲಿ ಇದೀಗ ಜಾಮೀನು ಮಂಜೂರಾಗಿದ್ದು, ಆಕೆ ಜೈಲಿನಿಂದ ಬಿಡುಗಡೆಯಾಗಿದ್ದಾಳೆ. ಬಿಡುಗಡೆ ವೇಳೆ ವಿದೇಶಕ್ಕೆ ತೆರಳದಂತೆ ಹಾಗೂ ಸಾಕ್ಷ್ಯಕ್ಕೆ ಸಂಬಂಧಪಟ್ಟಂತೆ ಯಾರನ್ನೂ ಭೇಟಿಯಾಗದಂತೆ ಷರತ್ತುಗಳನ್ನು ವಿಧಿಸಲಾಗಿದೆ.
ಮಗಳನ್ನು ಹತ್ಯೆ ಮಾಡಲು ಆಕೆಗೆ ಸಹಕರಿಸಿದ ಆಕೆಯ ಪತಿ ಪೀಟರ್ ಮುಖರ್ಜಿಗೆ ಈಗಾಗಲೇ ಜಾಮೀನು ಲಭಿಸಿದೆ.