ನವದೆಹಲಿ, ಮೇ 20 (DaijiworldNews/DB): ದೇಶಾದ್ಯಂತ ಜೂನ್ನಿಂದ ಕೋವಿಡ್ ಲಸಿಕಾ ಅಭಿಯಾನವನ್ನು ಚುರುಕುಗೊಳಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳ ಜೊತೆಗೆ ನಡೆದ ಸಭೆಯಲ್ಲಿ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಈ ಬಗ್ಗೆ ಸೂಚನೆ ನೀಡಿ, ಕೊರೊನಾ ಪ್ರಕರಣಗಳ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಇನ್ನೂ ಲಸಿಕೆ ಪಡೆದುಕೊಳ್ಳದೇ ಇರುವವರಿಗೆ ಲಸಿಕೆ ನೀಡುವ ಜವಾಬ್ದಾರಿಯನ್ನು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಮುಂದುವರಿಸಬೇಕು. ಜೂನ್ನಿಂದ ಎರಡು ತಿಂಗಳ ಅವಧಿಯಲ್ಲಿ ಪ್ರತಿ ಮನೆಗೂ ಲಸಿಕೆ ಅಭಿಯಾನವನ್ನು ನಡಸಬೇಕೆಂದು ನಿರ್ದೇಶನ ನೀಡಿದ್ದಾರೆ.
ಅಭಿಯಾನ ಪರಿಣಾಮಕಾರಿಯಾಗಬೇಕು. ಲಸಿಕೆ ಪೋಲು ಆಗದಂತೆ ಮುಂಜಾಗ್ರತೆ ವಹಿಸಬೇಕು. ಬಳಕೆ ಅವಧಿ ಮೀರಲು ದಿನ ಸನ್ನಿಹಿತವಾಗಿರುವ ಲಸಿಕೆಗಳನ್ನೇ ಮೊದಲು ಬಳಸಬೇಕು. 'ಹರ್ ಘರ್ ದಸ್ತಕ್' (ಮನೆಗೂ ಲಸಿಕೆ ಅಭಿಯಾನ) ಅಭಿಯಾನಕ್ಕಾಗಿ ಜಿಲ್ಲೆ, ಗ್ರಾಮ, ಬ್ಲಾಕ್ ಹಂತದಲ್ಲಿ ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತರಬೇಕು. ಆದ್ಯತೆ ಮೇರೆಗೆ ಮೊದಲ, ಎರಡನೇ ಮತ್ತು ಬೂಸ್ಟರ್ ಡೋಸ್ ನೀಡಿ ಎಂದವರು ತಿಳಿಸಿದ್ದಾರೆ.