ಪಟಿಯಾಲ, ಮೇ 20 (DaijiworldNews/MS): ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು ಪಟಿಯಾಲದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
34 ವರ್ಷಗಳ ಹಿಂದಿನ ರಸ್ತೆ ಅಪಘಾತ ಪ್ರಕರಣ ಸಂಬಂಧ ಕಾಂಗ್ರೆಸ್ ನಾಯಕ ಹಾಗೂ ಪಂಜಾಬ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧುಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಇಂದು ಪಾಟಿಯಾಲ ಕೋರ್ಟ್ ಗೆ ಶರಣಾಗಿದ್ದಾರೆ.
ನಿನ್ನೆ ಮೂರು ದಶಕಗಳಷ್ಟು ಹಳೆಯದಾದ ರಸ್ತೆ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರಿಗೆ ಸುಪ್ರೀಂ ಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಅಸಮರ್ಪಕ ಶಿಕ್ಷೆಯನ್ನು ವಿಧಿಸುವ ಯಾವುದೇ ಅನುಚಿತ ಸಹಾನುಭೂತಿಯು ನ್ಯಾಯ ವ್ಯವಸ್ಥೆಯನ್ನು ಮತ್ತಷ್ಟು ಹಾನಿಗೊಳಿಸುತ್ತದೆ ಮತ್ತು ಕಾನೂನಿನ ಪರಿಣಾಮಕಾರಿತ್ವದಲ್ಲಿ ಸಾರ್ವಜನಿಕ ವಿಶ್ವಾಸವನ್ನು ಹಾಳುಮಾಡುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತ್ತು.
ಘಟನೆ ಹಿನ್ನಲೆ:
1988 ಡಿಸೆಂಬರ್ 27ರಂದು ಪಟಿಯಾಲಾದಲ್ಲಿ ಜಿಪ್ಸಿ ವಾಹನದಲ್ಲಿ ತೆರಳುತ್ತಿದ್ದ ಸಿಧು, ರಸ್ತೆ ಮಧ್ಯದ ಕ್ರಾಸಿಂಗ್ನಲ್ಲಿ ತಮ್ಮ ವಾಹನ ನಿಲ್ಲಿಸಿದ್ದರು. ಈ ವೇಳೆ ಸಿಧು ಜೊತೆಗೆ ಅವರ ಸ್ನೇಹಿತ ರೂಪಿಂದರ್ ಸಿಂಗ್ ಸಂಧು ಕೂಡಾ ಇದ್ದರು. ಇದೇ ದಾರಿಯಲ್ಲಿ ಮಾರುತಿ ಕಾರ್ನಲ್ಲಿ ಬಂದ ಗುರ್ನಾಮ್ ಸಿಂಗ್ ಎಂಬ ವೃದ್ಧರು ತಮಗೆ ಜಾಗ ಬಿಡುವಂತೆ ಕೇಳಿಕೊಂಡಾಗ ಸಿಧು ಅವರು ಗುರ್ನಾಮ್ ಅವರ ವಾಹನ ಸಾಗಲು ದಾರಿ ಬಿಡಲಿಲ್ಲ ಎಂದು ಆರೋಪಿಸಲಾಗಿದೆ. ಈ ವೇಳೆ ವೃದ್ಧ ಗುರ್ನಾಮ್ ಸಿಂಗ್ ಹಾಗೂ ಅವರ ಜೊತೆಗೆ ಇದ್ದ ಜಸ್ವಿಂದರ್ ಸಿಂಗ್ ಅವರ ಮೇಲೆ ಸಿಧು ಹಲ್ಲೆ ನಡೆಸಿದರು ಎಂದೂ ಆರೋಪಿಸಲಾಗಿದೆ. ಮೊದಲೇ ಅನಾರೋಗ್ಯದಿಂದ ಬಳಲುತ್ತಿದ್ದ ಗುರ್ನಾಮ್ ಸಿಂಗ್ ಅವರು ಹಲ್ಲೆಯಿಂದಾಗಿ ಅಸ್ವಸ್ಥರಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮೃತ ಪಟ್ಟಿದ್ದರು.