ರಾಜಗಢ (ಮಧ್ಯಪ್ರದೇಶ), ಮೇ 20 (DaijiworldNews/DB): ದಲಿತ ಯುವಕನ ಮದುವೆ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ ಎಂಟು ಮಂದಿ ಆರೋಪಿಗಳ ಮನೆಯನ್ನು ಮಧ್ಯಪ್ರದೇಶ ಸರ್ಕಾರ ಬುಲ್ಡೋಜರ್ ಮೂಲಕ ಧ್ವಂಸಗೊಳಿಸಿದೆ.
ರಾಜಗಢ ಜಿಲ್ಲೆಯ ಜಿರಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಘಟನೆ ಸಂಬಂಧ 21ಮಂದಿ ಆರೋಪಿಗಳ ಪೈಕಿ 8 ಆರೋಪಿಗಳ ಮನೆಗಳನ್ನು ಈಗಾಗಲೇ ನೆಲಸಮ ಮಾಡಲಾಗಿದೆ. ಪೊಲೀಸ್ ಬಂದೋಬಸ್ತ್ನೊಂದಿಗೆ ಕಂದಾಯ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳ ಸಮ್ಮುಖದಲ್ಲಿ ನೆಲಸಮ ಕಾರ್ಯ ನಡೆಯಿತು.
ದಲಿತ ಯುವಕನ ಮದುವೆಯಲ್ಲಿ ವಧುವಿನ ಕಡೆಯುವರು ವರನ ಮೆರವಣಿಗೆ ನಡೆಸುತ್ತಿದ್ದರು. ಈ ವೇಳೆ ಡಿಜೆಯನ್ನೂ ಹಾಕಲಾಗಿತ್ತು. ಆದರೆ ಮೆರವಣಿಗೆಯು ಧಾರ್ಮಿಕ ಕೇಂದ್ರವೊಂದರ ಬಳಿ ಸಾಗಿದಾಗ ಕೆಲವರು ಡಿಜೆ ಹಾಕಿರುವುದಕ್ಕೆ ಆಕ್ಷೇಪಿಸಿದರು. ಹೀಗಾಗಿ ಧಾರ್ಮಿಕ ಕೇಂದ್ರದ ಬಳಿ ಡಿಜೆ ನಿಲ್ಲಿಸಿ ದಾಟಿದ ಬಳಿಕ ಮತ್ತೆ ಹಾಕಲಾಯಿತು. ಆದರೆ ಕೆಲವು ಕಿಡಿಗೇಡಿಗಳು ಮೆರವಣಿಗೆ ಸಾಗುತ್ತಿದ್ದವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಮೂವರಿಗೆ ಗಾಯಗಳಾಗಿವೆ ಎಂದು ಪೊಲೀಸರು ಹೇಳಿರುವುದಾಗಿ ವರದಿಯಾಗಿದೆ.
ವಧುವಿನ ತಂದೆಯ ದೂರಿನ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ 21 ಆರೋಪಿಗಳನ್ನು ಪೊಲೀಸರು ಗುರುತಿಸಿದ್ದು, ಈ ಪೈಕಿ ಎಂಟು ಮಂದಿಯ ಮನೆಯನ್ನು ಧ್ವಂಸ ಮಾಡಲಾಗಿದೆ.