ಬೆಂಗಳೂರು, ಮೇ 20 (DaijiworldNews/MS): ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದವಾಗಿ ಮಾರ್ಪಟ್ಟಿದ್ದು ಕಾಂಗ್ರೆಸ್ -ಬಿಜೆಪಿ - ಜೆಡಿಎಸ್ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದೆ. ಈ ನಡುವೆ ಕಾಂಗ್ರೆಸ್ ಯುವ ಬ್ರಿಗೇಡ್ ಸಂಘಟನೆಯ ಸಂಸ್ಥಾಪಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿಚಾರವನ್ನು ಪಠ್ಯದಲ್ಲಿ ಅಳವಡಿಸಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದೆ.
ಈ ಬಗ್ಗೆ ಟ್ವೀಟ್ ಮಾಡಿದ ಕಾಂಗ್ರೆಸ್ ರಾಜ್ಯ ಘಟಕ, " ಈ ಸರ್ಕಾರಕ್ಕೆ ಏನಾದರು ಬುದ್ದಿ ಇದೆಯೇ? ಒಂದು ಕಡೆ ಬುದ್ಧ, ಬಸವಣ್ಣ, ನಾರಾಯಣ ಗುರು, ಭಗತ್ ಸಿಂಗ್ ರಂತಹ ಮಹನೀಯರ ಪಠ್ಯಗಳನ್ನ ತೆಗೆದು ಹಾಕುತ್ತಾರೆ. ಇನ್ನೊಂದೆಡೆ ಆರ್ ಎಸ್ ಎಸ್ ನ ಹೆಗಡೇವಾರ್, ಸುಳ್ಳಿನ ಸರಮಾಲೆಯನ್ನೇ ಸುತ್ತುತ್ತಾ, ಯುವಕರ ದಾರಿ ತಪ್ಪಿಸುತ್ತ ಕಾಲಹರಣ ಮಾಡುವ ಸೂಲಿಬೆಲೆಯಂತಹ ಅಯೋಗ್ಯರ ಪಠ್ಯಗಳನ್ನು ಅಳವಡಿಸುತ್ತಾರೆ" ಎಂದು ಕಿಡಿಕಾರಿದೆ.
"ಸುಳ್ಳು ಭಾಷಣ ಮಾಡಿ, ಸುಳ್ಳಿನಿಂದ ಹಣ ಮಾಡಿ, ಸುಳ್ಳಿನಿಂದಲೇ ಬದುಕುತ್ತಿರುವ ಸೂಲಿಬೆಲೆಯಿಂದ ನಮ್ಮ ಮಕ್ಕಳು ಯಾವ ಆದರ್ಶಗಳನ್ನು ಕಲಿಯಬೇಕು? ಈ ಸೂಲಿಬೆಲೆಯ ಅರ್ಹತೆಯೇನು? ಅವರ ಪಠ್ಯ ಆಯ್ಕೆ ಮಾಡಿರುವ ಚಕ್ರತೀರ್ಥರ ಅರ್ಹತೆಯೇನು? ಯಾವ ಅರ್ಹತೆಯ ಮೇಲೆ ಅವರನ್ನು ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ್ದೀರಿ" ಎಂದು ಪ್ರಶ್ನಿಸಿದೆ.