ಹುಬ್ಬಳ್ಳಿ, ಮೇ 20 (DaijiworldNews/HR): ಜೆಡಿಎಸ್ ತೊರೆದು ಬಿಜೆಪಿಗೆ ಸೇರುವ ಅನಿವಾರ್ಯತೆ ನನಗಿರಲಿಲ್ಲ. ನನ್ನ ಕ್ಷೇತ್ರದ ಶಿಕ್ಷಕರು, ಹಿತೈಷಿಗಳು ಬಿಜೆಪಿ ಸೇರ್ಪಡೆಯಾಗುವ ಬಲವಾದ ಇಂಗಿತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಬಿಜೆಪಿಗೆ ಸೇರ್ಪಡೆಯಾದ ಬಳಿಕ ಮೊದಲ ಬಾರಿಗೆ ಪಕ್ಷದ ಕಚೇರಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ದಶಕಗಳಲ್ಲಿ ಏಳು ಚುನಾವಣೆಗಳನ್ನು ಪಕ್ಷೇತರ ಹಾಗೂ ಪಕ್ಷದ ಅಭ್ಯರ್ಥಿಯಾಗಿ ನಾನು ಗೆದ್ದಿದ್ದೇನೆ. ರಾಜಕೀಯ ಜೀವನದಲ್ಲಿ ಎಲ್ಲಾ ಪಕ್ಷದ ನಾಯಕರೊಂದಿಗೆ ಉತ್ತವ ಬಾಂಧವ್ಯ ಹೊಂದಿದ್ದೇನೆ ಎಂದರು.
ಇನ್ನು ಬಿಜೆಪಿಗೆ ಸೇರ್ಪಡೆ ಕುರಿತು ಅಭಿಪ್ರಾಯ ಸಲಹೆಗಳು ಬಂದಾಗ ನಾಲ್ಕು ಜಿಲ್ಲೆಯ ಶಿಕ್ಷಕರು, ಹಿತೈಷಿಗಳೊಂದಿಗೆ ಸಭೆ ಮಾಡಿ ಈ ನಿರ್ಧಾರಕ್ಕೆ ಬಂದಿದ್ದು, ಚುನಾವಣೆ ದೃಷ್ಟಿಯಿಂದ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ. ಬದಲಾಗಿ ಉಳಿದಿರುವ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಸಹಕಾರಿಯಾಗಬಲ್ಲದು ಎನ್ನುವ ಉದ್ದೇಶ ನನ್ನಲ್ಲಿದೆ ಎಂದು ಹೇಳಿದ್ದಾರೆ.