ಜೈಪುರ, ಮೇ 20 (DaijiworldNews/DB): ಕೆಲವು ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಕೆಲಸ ಮಾಡುತ್ತಿವೆ. ಅದಕ್ಕಾಗಿ ಸಣ್ಣ ಘಟನೆಗಳನ್ನೇ ಹಿಡಿದುಕೊಂಡು ಅನಗತ್ಯ ವಿವಾದಗಳನ್ನು ಸೃಷ್ಟಿಸುತ್ತಿವೆ. ಅಭಿವೃದ್ದಿ ಮರೆ ಮಾಚುವುದೇ ಅಂತಹ ಪಕ್ಷಗಳ ಕೆಲಸವಾಗಿದೆ ಎಂದು ವಿಪಕ್ಷಗಳ ವಿರುದ್ದ ಪ್ರಧಾನಿ ನರೇಂದ್ರ ಮೋದಿ ಹರಿಹಾಯ್ದಿದ್ದಾರೆ.
ಜೈಪುರದಲ್ಲಿ ಮಾತನಾಡಿದವರು, ಜಗತ್ತು ಇಂದು ಭಾರತದತ್ತ ತಿರುಗಿ ನೋಡುತ್ತಿದೆ. ದೇಶೀಯ ಜನರೂ ಬಿಜೆಪಿಯತ್ತ ಒಲವು ಹೊಂದಿದ್ದಾರೆ. ಭರವಸೆ, ನಂಬಿಕೆಯೊಂದಿಗೆ ಪಕ್ಷವನ್ನು ಜನ ನೆಚ್ಚಿಕೊಂಡಿದ್ದಾರೆ ಎಂದರು.
ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವು ಎಂಟು ವರ್ಷಗಳಲ್ಲಿ ಅತ್ಯುತ್ತಮ ಸಾಧನೆಯನ್ನು ತೋರಿದೆ. ಅಭಿವೃದ್ದಿ ,ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಭದ್ರತೆಯನ್ನು ಜನರಿಗೆ ಕಲ್ಪಿಸಿಕೊಡಲು ಸರ್ಕಾರ ಹೆಚ್ಚು ಒತ್ತು ನೀಡಿದೆ. ಈ ತಿಂಗಳಲ್ಲಿ ಎಂಟನೇ ವಾರ್ಷಿಕೋತ್ಸವವನ್ನು ಎನ್ಡಿಎ ಸರ್ಕಾರ ಆಚರಿಸಿತ್ತಿರುವುದು ಹೆಮ್ಮೆಯ ವಿಚಾರ ಎಂದರು.
2014ರಿಂದೀಚೆಗೆ ಸರ್ಕಾರ ಬಡವರ ಕಲ್ಯಾಣ, ಪಾರದರ್ಶಕ ಆಡಳಿತ ನಡೆಸಿದೆ. ಹೆಣ್ಣು ಮಕ್ಕಳು, ಮಹಿಳೆಯರ ಸಬಲೀಕರಣಕ್ಕೆ ಸರ್ಕಾರ ಒತ್ತುನೀಡಿದೆ. ಇಡೀ ಜಗತ್ತು ಭಾರತದ ಮೇಲೆ ನಿರೀಕ್ಷೆ ಹೊಂದಿರುವುದು ನಮ್ಮ ಸಾಧನೆಗೆ ಸಿಕ್ಕಿದ ಗೌರವವಾಗಿದೆ. ದೇಶದ ಅಭಿವೃದ್ದಿ ಬಗ್ಗೆ ಜನರು ಹೊಂದಿದ್ದ ಹತಾಶಾಭಾವನೆಯನ್ನು ಈ ಎಂಟು ವರ್ಷಗಳ ಅವಧಿಯಲ್ಲಿ ಬಿಜೆಪಿ ತೊಡೆದು ಹಾಕಿದೆ ಎಂದವರು ತಿಳಿಸಿದರು.
ಮುಂದಿನ ಎರಡೂವರೆ ದಶಕದಲ್ಲಿ ದೇಶದ ಸ್ವಾತಂತ್ರಕ್ಕೆ ಶತಮಾನೋತ್ಸವ ಸಂಭ್ರಮ. ಆ ವೇಳೆಗೆ ದೇಶದ ಅಭಿವೃದ್ಧಿಯ ಗುರಿಯೇ ಹೊಸತನದೊಂದಿಗೆ ಬದಲಾಗಲಿದೆ. ಅದಕ್ಕಾಗಿ ಪಕ್ಷ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.