ಮಹಾರಾಷ್ಟ್ರ, ಮೇ 20 (DaijiworldNews/DB): ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರು ವಿದ್ಯಾರ್ಥಿಗಳು ಸೇರಿದಂತೆ 9 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಪುಣೆ ಜಿಲ್ಲೆಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಗಳನ್ನು ರಿತಿನ್ ದಿಡ್ಡಿ, ನವ್ಯಾ ಭೋಸ್ಲೆ, ಪರೀಕ್ಷಿತ್ ಅಗರ್ವಾಲ್ ಮತ್ತು ತನಿಷ್ಕಾ ದೇಸಾಯಿ ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಭೀಮಾ ನದಿಯ ಚಸ್ಕಮಾನ್ ಅಣೆಕಟ್ಟಿನ ಹಿನ್ನೀರಿನಲ್ಲಿ ನಾಲ್ವರು ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿದ್ದಾರೆ. ಮೃತ ವಿದ್ಯಾರ್ಥಿಗಳೆಲ್ಲರೂ ಕೃಷ್ಣಮೂರ್ತಿ ಫೌಂಡೇಶನ್ನ ಸಹ್ಯಾದ್ರಿ ಇಂಟರ್ನ್ಯಾಶನಲ್ ಸ್ಕೂಲ್ನಲ್ಲಿ 10ನೇ ತರಗತಿ ಪರೀಕ್ಷೆ ಮುಗಿಸಿದ್ದ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ವಿದ್ಯಾರ್ಥಿಗಳು ಈಜು ಬಾರದಿದ್ದರೂ ಗುಂಡಲವಾಡಿ ಪ್ರದೇಶಕ್ಕೆ ಈಜಾಡಲು ತೆರಳಿದ್ದರು. ಇವರೊಂದಿಗೆ ಇದ್ದ ಇತರ ವಿದ್ಯಾರ್ಥಿಗಳನ್ನು ಸ್ಥಳೀಯರು ರಕ್ಷಿಸಿದ್ದಾರೆ ಎಂದು ಖೇಡ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸತೀಶ್ಕುಮಾರ್ ಗುರವ್ ತಿಳಿಸಿದ್ದಾರೆ.
ಪ್ರತ್ಯೇಕ ಪ್ರಕರಣದಲ್ಲಿ ವೆಲ್ವಂಡಿ ನದಿಯ ಭಟ್ಘರ್ ಅಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಿ ಐವರು ಮಹಿಳೆಯರು ಜೀವ ಕಳೆದುಕೊಂಡಿದ್ದಾರೆ. ಇವರೆಲ್ಲರು ನರೇಗಾಂವ್ ಗ್ರಾಮದಲ್ಲಿ ಸಂಬಂಧಿಕರೊಬ್ಬರ ಮದುವೆಗೆ ಬಂದಿದ್ದರು. ಭಟ್ಘರ್ ಅಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ ಬಹಿರ್ದೆಸೆಗೆ ತೆರಳಿದ್ದ ವೇಳೆ ಆಯತಪ್ಪಿ ನೀರಿಗೆ ಬಿದ್ದಿದ್ದರು ಎಂದು ಪುಣೆ ಗ್ರಾಮಾಂತರ ಪೊಲೀಸ್ ಠಾಣೆ ಕಾನ್ಸ್ಟೆಬಲ್ ಅಭಿನವ್ ದೇಶಮುಖ್ ತಿಳಿಸಿರುವುದಾಗಿ ವರದಿಯಾಗಿದೆ.