ಬೆಂಗಳೂರು, ಮೇ 20 (DaijiworldNews/MS): ರಾಜ್ಯದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದವಾಗಿ ಮಾರ್ಪಟ್ಟಿದ್ದು ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದೆ. ಈ ನಡುವೆ ಬಿಜೆಪಿ ರಾಜ್ಯ ಘಟಕವು ಸರಣಿ ಟ್ವೀಟ್ ಮಾಡಿ , ಶಿಕ್ಷಣದಲ್ಲಿ ಬಣ್ಣ ಹುಡುಕುವುದೇ ಕಾಂಗ್ರೆಸ್ ಚಾಳಿಯಾಗಿದೆ ಎಂದು ಆರೋಪಿಸಿದೆ.
ಕಾಂಗ್ರೆಸ್ಸಿಗರೇ, ಮೆಕಾಲೆ ಪ್ರಣೀತ ಶಿಕ್ಷಣ ವ್ಯವಸ್ಥೆಯ ಬಡಿವಾರವನ್ನು ಇನ್ನೆಷ್ಟು ದಿನ ಮಕ್ಕಳ ಮೇಲೆ ಹೇರಲು ಯತ್ನಿಸುತ್ತೀರಿ? ನೀವು ಬಳುವಳಿಯಾಗಿ ಪಡೆದ ಗುಲಾಮಿ ಇತಿಹಾಸವನ್ನು ಮಾತ್ರ ವಿದ್ಯಾರ್ಥಿಗಳು ಓದಬೇಕು ಎನ್ನುವುದನ್ನು ಸ್ವತಂತ್ರ ಭಾರತೀಯರು ಸಹಿಸಲು ಸಾಧ್ಯವೇ, ಶಿಕ್ಷಣದಲ್ಲಿ ಬಣ್ಣ ಹುಡುಕುವುದೇ ಕಾಂಗ್ರೆಸ್ ಚಾಳಿಯಾಗಿದೆ.
ಶಿಕ್ಷಣದಲ್ಲಿ ಇರಬೇಕಾದದ್ದು ಮೌಲ್ಯವೇ ಹೊರತು, ಕಾಂಗ್ರೆಸ್ ಪ್ರತಿಪಾದಿಸುವ ಬಣ್ಣ, ರುಚಿಯಲ್ಲ ಎಂದು ಹೇಳಿದೆ
ಅಕ್ಬರ್ ದಿ ಗ್ರೇಟ್, ಮೈಸೂರು ಹುಲಿ ಟಿಪ್ಪು ಸುಲ್ತಾನ್, ಅಲೆಗ್ಸಾಂಡರ್ ದಿ ವಾರಿಯರ್ ಹೀಗೆ ಕೆಲವರನ್ನು ಮಾತ್ರ ಮಹಾನ್ ಚಿತ್ರಿಸಿದ್ದೇಕೆ?ದಶಕಗಳಿಂದ ಮಕ್ಕಳಲ್ಲಿ ಕಾಂಗ್ರೆಸ್ ಇದನ್ನೇ ಬಿತ್ತಿದೆ. ಈಗಿನ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಇದನ್ನು ಸರಿಪಡಿಸುವ ಕೆಲಸ ಮಾಡುತ್ತಿರುವುದು ಸ್ವಾಗತಾರ್ಹ ಮತ್ತು ಅಭಿನಂದನೀಯ.ಭಾರತೀಯರಿಗೆ ಬೇಕಾದದ್ದು ನಮ್ಮ ಶೌರ್ಯ ಪರಂಪರೆಯ ಮೌಲ್ಯಯುತ ಇತಿಹಾಸವೇ ಹೊರತು, ಕಾಂಗ್ರೆಸ್ಸಿಗರು ಭಜನೆ ಮಾಡುವ ಪರಕೀಯರ ಇತಿಹಾಸವಲ್ಲ.ದೇಶವನ್ನು 800 ವರ್ಷಗಳ ಕಾಲ ಲೂಟಿ ಹೊಡೆದವರ ಇತಿಹಾಸವನ್ನು ವೈಭವೀಕರಿಸುವುದರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಷ್ಟೊಂದು ಆಸಕ್ತಿಯೇಕೆ ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ಪಕ್ಷವು ಶಿಕ್ಷಣದಲ್ಲಿ ಭಗವದ್ಗೀತೆ ,ಭಾರತೀಯ ಪರಂಪರೆ ಪ್ರಕಟಿಸಿದರೆ , ವಾಸ್ತವತೆ ಬೋಧಿಸಿದರೆ ವಿರೋಧ ಮಾಡುತ್ತಿದೆ. ಬರೇ ಚಾಚಾ ನೆಹರೂ, ಉಕ್ಕಿನ ಮಹಿಳೆ, ನಕಲಿ ಗಾಂಧಿ ಪರಿವಾರದ ಶಿಕ್ಷಣ ಬೋಧಿಸಬೇಕೇ? ಪ್ರಗತಿಪರರೆಂದರೆ ಯಥಾಸ್ಥಿತಿವಾದಿಗಳು. ಅಂದರೆ ಮೆಕಾಲೆ ಶಿಕ್ಷಣ ಪ್ರತಿಪಾದಕರು. ಭಾರತೀಯತೆಯನ್ನು ಪ್ರತಿಪಾದಿಸಲು ಇರುವ ಮೊದಲ ಅಡ್ಡಿ ಪ್ರಗತಿಪರರದ್ದೇ, ಇವರ ಹಿಂದೆ ಕಾಂಗ್ರೆಸ್ ಓಡುತ್ತದೆ ಅಷ್ಟೇ. ಭಾರತೀಯತೆ ಪ್ರತಿಪಾದಿಸಿದರೆ ಕಾಂಗ್ರೆಸ್ಸಿಗರಿಗೇನು ಸಮಸ್ಯೆ? ಎಂದು ಕೇಳಿದೆ
ಶಿಕ್ಷಣದ ಮೂಲಕ ಒಂದಷ್ಟು ಪೀಳಿಗೆಗಳನ್ನು ಕಾಂಗ್ರೆಸ್ ಹಾಳು ಮಾಡಿತು.ಈಗ ಶಿಕ್ಷಣ ವ್ಯವಸ್ಥೆಯಲ್ಲಿ, ಪಠ್ಯದಲ್ಲಿ ಬದಲಾವಣೆ ತಂದರೆ ಸುಳ್ಳುಗಳ ಮೂಲಕ ದಾರಿತಪ್ಪಿಸುತ್ತಿದ್ದಾರೆ. ಸುಳ್ಳಿನ ಆಟ ಇನ್ನು ನಡೆಯದು, ಸುಳ್ಳಿನ ಇತಿಹಾಸವನ್ನು ಬದಲಾಯಿಸುತ್ತೇವೆ.ತಮ್ಮ ಸಿದ್ಧಾಂತ ಸವಕಲಾಗುತ್ತಿದೆ ಎಂದಾಗ ಕಾಂಗ್ರೆಸ್ ಹಾಗೂ ಕಮ್ಯುನಿಷ್ಟ್ ಸುಳ್ಳಿನ ಮೊರೆ ಹೋಗುತ್ತದೆ, ಇದು ಹಳೆಯ ಚಾಳಿ.ಪಠ್ಯದಿಂದ ನಾರಾಯಣಗುರು, ಭಗತ್ ಸಿಂಗ್ ಅವರ ಪಾಠ ಕೈ ಬಿಡಲಾಗಿದೆ ಎಂಬುದು ಹಸಿ ಸುಳ್ಳು.ಸಿದ್ದರಾಮಯ್ಯ, ಡಿಕೆಶಿ ಅವರೇ ಈ ಮನಸ್ಥಿತಿಯಿಂದ ಹೊರಬನ್ನಿ, ಸುಳ್ಳಿನಿಂದ ಏನು ಸಾಧಿಸುತ್ತೀರಿ? ಭವ್ಯ ಭಾರತದ ಹಿಂದೆ ಸಾಕಷ್ಟು ಮಹನೀಯರಿದ್ದಾರೆ. ಅವರ ತ್ಯಾಗ, ಬಲಿದಾನ, ಯೋಚನೆ, ದಿಕ್ಸೂಚಿ ಸೇರಿದಂತೆ ಒಂದಷ್ಟು ಪರಂಪರೆಯನ್ನು ಮರೆತುಬಿಟ್ಟಿದ್ದೇವೆ. ಈಗ ಅದನ್ನೇ ಹೇಳಲು ನಾವು ಹೊರಟಿದ್ದೇವೆ. ಹೇಳಿಯೇ ಹೇಳುತ್ತೇವೆ ಇದಕ್ಕೇಕೆ ವಿರೋಧ? ಎಂದು ಸವಾಲ್ ಹಾಕಿದೆ.
ಪಠ್ಯ ಪುಸ್ತಕದ ಮೂಲಕ ಒಂದು ಪಂಥಿಯ, ಸಮುದಾಯದ ಓಲೈಕೆಗಾಗಿ ಹಿಂದೂ ವಿರೋಧಿಗಳನ್ನು ಹೋರಾಟಗಾರರು, ವೀರರು, ಶೂರರು ಎಂದು ಕಾಂಗ್ರೆಸ್ ಬಿಂಬಿಸುತ್ತಾ ಬಂದಿವೆ.ಇದನ್ನೆಲ್ಲಾ ತೊಡೆದು ಹಾಕಲು ಪಠ್ಯ ಪುಸ್ತಕದಲ್ಲಿ ಬದಲಾವಣೆ ಆಗಲೇ ಬೇಕಿದೆ. ಬದಲಾವಣೆ ಪ್ರಕೃತಿ ನಿಯಮ ಎಂದು ಬಿಜೆಪಿ ಹೇಳಿದೆ.