ಬೆಂಗಳೂರು, ಮೇ 20 (DaijiworldNews/DB): ಪಕ್ಷದ ಬಗ್ಗೆ ಸಮರ್ಥವಾಗಿ ಮಾತನಾಡಬಲ್ಲ ವಕ್ತಾರರ ಹುಡುಕಾಟದಲ್ಲಿರುವ ಯುವ ಕಾಂಗ್ರೆಸ್ ಅದಕ್ಕಾಗಿ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯನ್ನು ಆಯೋಜಿಸಿದ್ದು, ವಿಜೇತರಿಗೆ ಐಫೋನ್ ಬಹುಮಾನ ಘೋಷಿಸಿದೆ.
ಕೆಪಿಸಿಸಿ ಕಚೇರಿಯಲ್ಲಿ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ಯುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೃಷ್ಣ, ರಾಜ್ಯ ಘಟಕದ ಅಧ್ಯಕ್ಷ ಮೊಹಮದ್ ನಲಪಾಡ್ ಹ್ಯಾರಿಸ್ ಅವರು ಈ ವಿಚಾರವನ್ನು ಪ್ರಕಟಿಸಿದರು. ವಿಜೇತರನ್ನು ಪಕ್ಷದ ವಕ್ತಾರರನ್ನಾಗಿ ನೇಮಕ ಮಾಡಿಕೊಳ್ಳಲಾಗುವುದು ಎಂದೂ ತಿಳಿಸಿದರು.
ಯುವಕರಿಗೆ ಅಭಿಪ್ರಾಯ ಹಂಚಿಕೊಳ್ಳಲು ವೇದಿಕೆ ಕಲ್ಪಿಸುವವ ಉದ್ದೇಶದಿಂದ ಈ ಅವಕಾಶವನ್ನು ನೀಡಲಾಗುತ್ತದೆ. ಅಲ್ಲದೆ ಕಾಂಗ್ರೆಸ್ನ ವಿಚಾರವನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಉದ್ದೇಶದಿಂದ ಸ್ಪರ್ಧೆ ಮೂಲಕ ವಕ್ತಾರರನ್ನು ಆಯ್ಕೆಮಾಡಲಾಗುತ್ತದೆ. ರಾಜ್ಯ ಮಟ್ಟದಲ್ಲಿ ವಿಜೇತರಾದವರಿಗೆ ರಾಷ್ಟ್ರ ಮಟ್ಟದಲ್ಲಿಯೂ ಅವಕಾಶ ನೀಡಲಾಗುತ್ತದೆ ಎಂದರು.
ಇತರ ಪಕ್ಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳನ್ನು ನಿಜ ಮಾಡಲು ವಕ್ತಾರರನ್ನು ನೇಮಿಸಲಾಗುತ್ತದೆ. ಆದರೆ ನಮ್ಮ ಪಕ್ಷದ ವೇದಿಕೆಯಲ್ಲಿ ಅಭಿಪ್ರಾಯ ಹಂಚಿಕೆ, ಜ್ಞಾನವನ್ನು ಪ್ರಸ್ತುತಪಡಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಬಿ.ವಿ. ಶ್ರೀನಿವಾಸ್ ಹೇಳಿದರು.
ಸ್ಪರ್ಧೆ ಕುರಿತು ಮಾಹಿತಿ ನೀಡಿದ ನಲಪಾಡ್, ಜಿಲ್ಲಾ ಮಟ್ಟದಲ್ಲಿ ಮೊದಲ ಸ್ಪರ್ಧೆ ನಡೆಯಲಿದ್ದು,ಆಯ್ಕೆಯಾದವರಿಗೆ ಜೂನ್ 18ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಅಂತಿಮ ಸ್ಪರ್ಧೆ ಇರುತ್ತದೆ. ಇದರಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಲಾಗುವುದು. ಮೊದಲ ಬಹುಮಾನವಾಗಿ ಐ ಫೋನ್ 13 ಪ್ರೋ, ಎರಡನೇ ಬಹುಮಾನವಾಗಿ ಐ ಫೋನ್ 13 ಹಾಗೂ ಮೂರನೇ ಬಹುಮಾನವಾಗಿ ಒನ್ ಪ್ಲಸ್ ಫೋನ್ ಅನ್ನು ನೀಡಲಾಗುವುದು. ಇದಲ್ಲದೆ ಉತ್ತಮ ಭಾಷಣ ಮಾಡುವ 10 ಮಂದಿಯನ್ನು ಯುವ ಕಾಂಗ್ರೆಸ್ ವಕ್ತಾರರನ್ನಾಗಿ ನೇಮಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಉತ್ತಮ ಸಾಧನೆ ತೋರಿದವರಿಗೆ ಜಿಲ್ಲಾ ಮಟ್ಟದ ವಕ್ತಾರರನ್ನಾಗಿ ನೇಮಿಸಲಾಗುವುದು ಎಂದರು.
ಯುವ ಕಾಂಗ್ರೆಸ್ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯಾ, ದೀಪಿಕಾ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಚೈತ್ರಾ, ಮಾರುತಿ, ಎಐಸಿಸಿ ವಕ್ತಾರರಾದ ಐಶ್ವರ್ಯ ಮಹದೇವ್, ಪ್ರಧಾನ ಕಾರ್ಯದರ್ಶಿ ಆಶಿಕ್ ಗೌಡ ಉಪಸ್ಥಿತರಿದ್ದರು.