ಬೆಂಗಳೂರು, ಮೇ 20 (DaijiworldNews/HR): ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಬೆಳಗ್ಗೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಸುಭಾಷ್ ಗುಪ್ತ ಎಂದು ಗುರುತಿಸಲಾಗಿದೆ.
ಶುಕ್ರವಾರ ಬೆಳಗಿನ ಜಾವ 3:30ರ ಸುಮಾರಿಗೆ ಏರ್ ಪೋರ್ಟ್ನ ಪೊಲೀಸ್ ಕಂಟ್ರೋಲ್ ರೂಂಗೆ ಸುಭಾಷ್ ಕರೆ ಮಾಡಿ, ಏರ್ ಪೋರ್ಟ್ನಲ್ಲಿ ಬಾಂಬ್ ಇರಿಸಲಾಗಿದೆ ಎಂದು ಬೆದರಿಸಿದ್ದು, ಸುಮಾರು 2 ಗಂಟೆಗೂ ಹೆಚ್ಚು ಕಾಲ ತಪಾಸಣೆ ನಡೆಸಿದ ಅಧಿಕಾರಿಗಳಿಗೆ ಇದೊಂದು ಹುಸಿ ಕರೆ ಎಂಬುದು ಗೊತ್ತಾಗಿದೆ.
ಇನ್ನು ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದ ಆರೋಪಿ ಸುಭಾಷ್ ನನ್ನು ಇದೀಗ ಪೊಲೀಸರು ಬಂಧಿಸಿದ್ದು, ತನ್ನ ಅಕ್ಕನಿಗೆ ವಂಚಿಸಿದ್ದ ಭಾವ ಡಿವೋರ್ಸ್ ನೀಡಿದ್ದು, ಇದರಿಂದ ಸೇಡು ತೀರಿಸಿಕೊಳ್ಳಲು ಆತನನ್ನು ಜೈಲಿಗೆ ಅಟ್ಟಬೇಕೆಂದು ಆತನ ಹೆಸರಲ್ಲಿ ಬಾಂಬ್ ಬೆದರಿಕೆ ಕರೆ ಮಾಡಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿರುವುದಾಗಿ ವರದಿಯಾಗಿದೆ.