ಬೆಂಗಳೂರು, ಮೇ 20 (DaijiworldNews/HR): ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಿಂದಾಗಿ ಒಂಬತ್ತು ಮಂದಿ ಸಾವನ್ನಪ್ಪಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಈ ಕುರಿತು ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ದಾವಣಗೆರೆ, ಹಾಸನ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ನಡೆದ ಪರಿಶೀಲನಾ ಸಭೆ ಬಳಿಕ ಮಾಹಿತಿ ನೀಡಿದ ಅವರು, ಮಳೆಯಿಂದಾಗಿ ಇಲ್ಲಿಯವರೆಗೆ 204 ಹೆಕ್ಟೇರ್ ಕೃಷಿ ಮತ್ತು 431 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಹಾನಿಗೊಳಗಾಗಿವೆ. ಸುಮಾರು 23 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ ಎಂದರು.
ಇನ್ನು ದಕ್ಷಿಣ ಕನ್ನಡ, ಕೊಡಗು, ಬೆಳಗಾವಿ ಮತ್ತು ರಾಯಚೂರಿನಲ್ಲಿ ನಾಲ್ಕು ಎನ್ ಡಿಆರ್ ಎಫ್ ತಂಡಗಳನ್ನು ನಿಯೋಜಿಸಲಾಗುವುದು. ಪ್ರತ್ಯೇಕ ತಂಡವು ಬೆಂಗಳೂರಿನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಿದೆ ಎಂದಿದ್ದಾರೆ.