ನವದೆಹಲಿ, ಮೇ 20 (DaijiworldNews/HR): ಜುಲೈ 1 ರಿಂದ ದೇಶದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಕೇಂದ್ರದ ಈ ನಿರ್ಧಾರವನ್ನು ಆರು ತಿಂಗಳು ಮುಂದೂಡುವಂತೆ ಪಾರ್ಲೆ ಆಗ್ರೋ ಕಂಪನಿ ಆಗ್ರಹಿಸಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ವರ್ಷದ ಹಿಂದೆಯೇ ಉತ್ಪಾದಕರು, ಅಂಗಡಿಯವರು, ಬೀದಿ ವ್ಯಾಪಾರಿಗಳು ಮತ್ತು ಸಾರ್ವಜನಿಕರಿಗೆ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಸೂಚನೆ ನೀಡಿತ್ತು.
ಇನ್ನು ಫ್ರೂಟಿ ಹಾಗೂ ಮೊದಲಾದ ಉತ್ಪನ್ನಗಳ ತಯಾರಿಕೆ ಕಂಪನಿಯಾದ ಪಾರ್ಲೆ ಆಗ್ರೋ ಪ್ಲಾಸ್ಟಿಕ್ ಸ್ಟ್ರಾ ಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಸಮಯ ಬೇಕಿರುವುದರಿಂದ ಪ್ಲಾಸ್ಟಿಕ್ ನಿಷೇಧಿಸಿಸುವ ನಿರ್ಧಾರವನ್ನು ಆರು ತಿಂಗಳ ಮಟ್ಟಿಗೆ ಮುಂದೂಡಬೇಕೆಂದು ಹೇಳಿದೆ.
ಕೇಂದ್ರ ಸರ್ಕಾರ ಜುಲೈ 1 ರಿಂದ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಕ್ಕೆ ನಿರ್ಧರಿಸಿದ್ದು, ದೆಹಲಿ ಸರ್ಕಾರವು ಜೂನ್ 1 ರಿಂದ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಿದೆ.
ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಇಂದು ಮಾಹಿತಿ ನೀಡಿದ್ದು, ಜೂನ್ 1 ರಿಂದ ದೆಹಲಿ ಸಚಿವಾಲಯದಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲಾಗುವುದು. ಮೊದಲ ಹಂತದಲ್ಲಿ ದೆಹಲಿ ಸಚಿವಾಲಯದಲ್ಲಿ ಯೂಸ್ ಅಂಡ್ ಥ್ರೋ ಪೆನ್ನುಗಳು ಮತ್ತು ನೀರಿನ ಬಾಟಲಿಗಳನ್ನು ನಿಷೇಧಿಸಲಾಗಿದೆ. ಅಲ್ಲದೆ ಸಚಿವಾಲಯದ ಆವರಣದಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ನಿಂದ ತಯಾರಿಸಿದ ಬ್ಯಾನರ್ಗಳು, ಪೋಸ್ಟರ್ಗಳು ಮತ್ತು ಆಹಾರ ಕಟ್ಲರಿಗಳನ್ನು ಸಹ ನಿಷೇಧಿಸಲಾಗಿದೆ ಎಂದರು.