ರಾಮನಗರ, ಮೇ 19 (DaijiworldNews/DB): ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮದ ಸರಮಾಲೆಯೇ ಇರುವುದರಿಂದ ಮರು ಪರೀಕ್ಷೆ ಅನಿವಾರ್ಯ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದಾರೆ.
ಪಿಎಸ್ಐ ಅಭ್ಯರ್ಥಿಗಳು ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದಿರುವ ಕುರಿತು ರಾಮನಗರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಅಕ್ರಮ ವಿವಿಧ ಪರೀಕ್ಷಾ ಕೇಂದ್ರದಲ್ಲಿ ನಡೆದಿರುವುದರಿಂದ ಮರು ಪರೀಕ್ಷೆ ಅನಿವಾರ್ಯವಾಗಿದೆ. ಒಎಂಆರ್ ಪ್ರತಿ ತಿದ್ದುಪಡಿ, ಬ್ಲೂಟೂತ್ ಬಳಸಿ ಅಕ್ರಮ ಸೇರಿದಂತೆ ನಾನಾ ರೀತಿಯಲ್ಲಿ ಅಕ್ರಮ ಎಸಗಲಾಗಿದೆ. ಷ್ಟಪಟ್ಟು ಪರೀಕ್ಷೆ ಬರೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನ್ಯಾಯ ನೀಡುವ ವಿಚಾರದಲ್ಲಿ ನಾವು ಅಸಹಾಯಕರು ಎಂದರು.
ಪರೀಕ್ಷೆಯಲ್ಲಿ ಈ ಹಿಂದೆಯೂ ಹಲವು ಬಾರಿ ಅಕ್ರಮಗಳು ಘಟಿಸಿದ್ದರೂ ಹಿಂದಿನ ಸರ್ಕಾರಗಳು ಯಾವುದೇ ಕ್ರಮ ಕೈಗೊಂಡಿರದ ಕಾರಣ ಈ ಬಾರಿಯೂ ಅಂತಹ ಅಕ್ರಮಗಳು ಪುನರಾವರ್ತನೆಯಾಗಿವೆ. ಅಂದೇ ಕಟ್ಟುನಿಟ್ಟಿನ ಕ್ರಮ ವಹಿಸುತ್ತಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ ಇದೇ ಕೊನೆ. ಮುಂದೆಂದೂ ಪರೀಕ್ಷೆಗಳಲ್ಲಿ ಅಕ್ರಮ ಆಗದಂತೆ ಕಠಿಣ ಕ್ರಮ ವಹಿಸಲಾಗುವುದು ಎಂದವರು ತಿಳಿಸಿದರು.