ಲಖನೌ, ಮೇ 19 (DaijiworldNews/DB): ನಿಯಮ ಮೀರಿ ಧ್ವನಿವರ್ಧಕ ಅಳವಡಿಸಿ ಗಟ್ಟಿಯಾಗಿ ನುಡಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಲ್ಲಿ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ತಮ್ಮ ಅಧಿಕೃತ ನಿವಾಸದಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ನಿಯಮ ಉಲ್ಲಂಘಿಸಿ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಅಳವಡಿಸಿರುವುದನ್ನು ಈಗಾಗಲೇ ಯಶಸ್ವಿಯಾಗಿ ತೆಗೆಯಲಾಗಿದೆ. ಮುಂದೆ ಎಲ್ಲಾದರು ನಿಯಮ ಮೀರಿದರೆ ಅಧಿಕಾರಿಗಳೇ ಹೊಣೆ ಎಂದರು.
ಈದ್, ರಾಮನವಮಿ ಮತ್ತು ಅಕ್ಷಯ ತೃತಿಯಗಳಂದು ಧ್ವನಿವರ್ಧಕಗಳ ಅಬ್ಬರವಿಲ್ಲದೆ ಶಾಂತಿಯುತ ಆಚರಣೆ ನಡೆದಿರುವುದು ಸಕಾರಾತ್ಮಕ ಸಂದೇಶ ರವಾನಿಸಲು ಕಾರಣವಾಗಿದೆ. ಧ್ವನಿವರ್ಧಕ ಶಬ್ದ ಹೊರಗೆ ಕೇಳದೆ ಆವರಣದೊಳಗಷ್ಟೇ ಸೀಮಿತವಾಗಿರಬೇಕು. ಅನಗತ್ಯವಾಗಿ ಹೆಚ್ಚುವರಿ ಧ್ವನಿ ಅಳವಡಿಸಿದ ಬಗ್ಗೆ ದೂರುಗಳು ಬಂದಲ್ಲಿ ಸಂಬಂಧಪಟ್ಟ ವೃತ್ತಾಧಿಕಾರಿ, ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸೂಚನೆ ನೀಡಿದರು.
ರಾಜ್ಯದ ವಿವಿಧೆಡೆ ಅಕ್ರಮ ವಾಹನ ನಿಲ್ದಾಣಗಳಿದ್ದು, ಅವುಗಳನ್ನು ಮುಂದಿನ ಎರಡು ದಿನಗಳಲ್ಲಿ ನಿರ್ಮೂಲನೆ ಮಾಡಬೇಕು. ಅಕ್ರಮ ಟ್ಯಾಕ್ಸಿ ಸ್ಟ್ಯಾಂಡ್ ಸಮಸ್ಯೆಗೆ ಶಾಶ್ವತ ಪರಿಹಾರ ತರುವಲ್ಲಿ ಸ್ಥಳೀಯ ಆಡಳಿತ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ವಾಹನ ನಿಲ್ದಾಣಗಳು ನಿಯಮಾನುಸಾರ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಬೇಕು. ರಸ್ತೆಯಲ್ಲಿ ಪಾರ್ಕಿಂಗ್ ನಡೆಸುವವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.