ಮೈಸೂರು, ಮೇ 19 (DaijiworldNews/HR): ನಾನು ರಾಜ್ಯ ರಾಜಕಾರಣಕ್ಕೆ ಮರಳುತ್ತೇನೆ ಎಂಬ ವಿಚಾರ ಕೇವಲ ಊಹಾಪೋಹ. ಇಂತಹ ಸುದ್ದಿಗಳಿಗೂ ನನಗೂ ಸಂಬಂಧವಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಾನು ಕೇಂದ್ರ ಸಚಿವೆಯಾಗಿ ದೊಡ್ಡ ಅವಕಾಶವನ್ನು ನಮ್ಮ ಪಕ್ಷ ನೀಡಿದ್ದು, ನಾನು ನೋಡದ ರಾಜ್ಯವನ್ನು ಸಚಿವೆಯಾಗಿ ನೋಡಿದ್ದೇನೆ. ರಾಜ್ಯದಲ್ಲಿ ಹರಡುತ್ತಿರುವ ಸುದ್ದಿಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದರು.
ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿರುವ ಅವರು, ಸಿದ್ದರಾಮಯ್ಯರ ಗೋ ಮುಖ ವ್ಯಾಘ್ರತನ ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಮೈಸೂರಿಗೆ ಸಿದ್ದರಾಮಯ್ಯ ಕೊಡುಗೆ ಏನು? ಸಿದ್ದರಾಮಯ್ಯ ಎದೆ ಮುಟ್ಟಿಕೊಂಡು ಹೇಳಲಿ. 5 ವರ್ಷ ಆಡಳಿತದಲ್ಲಿ ಒಂದು ಅಭಿವೃದ್ಧಿ ನಿರ್ಧಾರಗಳನ್ನು ಕೈಗೊಳ್ಳಲಿಲ್ಲ ಎಂದಿದ್ದಾರೆ.
ಇನ್ನು ಲಿಂಗಾಯತರನ್ನ ಒಡೆಯುವುದು, ಹಿಂದುಳಿದ ಜಾತಿಯನ್ನ ಒಡೆಯುವುದು ಇದೇ ಸಿದ್ದರಾಮಯ್ಯ ಮಾಡಿದ ಅಭಿವೃದ್ಧಿ ಕಾರ್ಯ. ಅಂದು ಕೆಲಸ ಮಾಡದವರು ಮುಂದೆ ಮಾಡುತ್ತೇವೆ ಎಂದು ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.