ನವದೆಹಲಿ, ಮೇ 19 (DaijiworldNews/DB): ವಿಶ್ವ ವಿದ್ಯಾನಿಲಯಗಳು ಸೈದ್ದಾಂತಿಕ ಸಂಘರ್ಷಗಳು ಏರ್ಪಡುವ ಸ್ಥಳವಾಗಬಾರದು. ಅಭಿಪ್ರಾಯ ವಿನಿಮಯಕ್ಕೆ ಇಲ್ಲಿ ವೇದಿಕೆ ಕಲ್ಪಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ದೆಹಲಿ ವಿಶ್ವವಿದ್ಯಾನಿಲಯದಲ್ಲಿ ನಡೆದ ಸ್ವರಾಜ್ನಿಂದ ಹೊಸ ಭಾರತದವರೆಗಿನ ಭಾರತದ ಐಡಿಯಾಸ್ ಅನ್ನು ಮರುಪರಿಶೀಲಿಸುವ ವಿಚಾರ ಸಂಕಿರಣದಲ್ಲಿ ಗುರುವಾರ ಮಾತನಾಡಿದ ಅವರು, ಸೈದ್ದಾಂತಿಕ ಹೋರಾಟಗಳಿಗೆ ಕಲಿಕಾ ಸ್ಥಳದಲ್ಲಿ ಜಾಗವಿರಬಾರದು. ಸೈದ್ದಾಂತಿಕ ಸಂಘರ್ಷ ವಿವಿಗಳಲ್ಲಿ ನಡೆಯುವುದು ಉತ್ತಮ ಬೆಳವಣಿಗೆಯಲ್ಲ. ಭೌಗೋಳಿಕ-ಸಾಂಸ್ಕೃತಿಕ ಶ್ರೀಮಂತಿಕೆಯ ದೇಶ ಭಾರತ ಎಂಬುದನ್ನು ಅರ್ಥ ಮಾಡಿಕೊಳ್ಳುವ ಅಗತ್ಯ ಇಂದಿನ ಕಾಲದಲ್ಲಿ ತೀರಾ ಇದೆ ಎಂದವರು ಅಭಿಪ್ರಾಯಪಟ್ಟರು.
ನರೇಂದ್ರ ಮೋದಿಯವರು ಪ್ರಧಾನಿಯಾಗುವುದಕ್ಕಿಂತ ಮುನ್ನ ಭಾರತದಲ್ಲಿ ರಕ್ಷಣಾ ನೀತಿ ಇರಲಿಲ್ಲ. ಅದು ಅಸ್ತಿತ್ವದಲ್ಲಿದ್ದರೂ ವಿದೇಶಾಂಗ ನೀತಿಯಡಿಯಲ್ಲೇ ಇತ್ತು. ಉರಿ, ಪುಲ್ವಾಮದಲ್ಲಿ ನಡೆದ ದಾಳಿಗೆ ಸರ್ಜಿಕಲ್ ಸ್ಟ್ರೈಕ್ ಮತ್ತು ವೈಮಾನಿಕ ದಾಳಿಗಳ ಮೂಲಕ ಪ್ರತಿ ಏಟು ನೀಡಿ ನಮ್ಮ ರಕ್ಷಣಾ ನೀತಿಯ ಬಲಾಢ್ಯತೆಯನ್ನು ವೈರಿ ದೇಶಕ್ಕೆ ತೋರಿಸಿಕೊಟ್ಟಿದ್ದೇವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ನಮ್ಮ ಬಲವನ್ನು ಇನ್ನಷ್ಟು ಸಾಬೀತುಪಡಿಸಿದ್ದೇವೆ ಎಂದರು.