ಬೆಂಗಳೂರು, ಮೇ 19 (DaijiworldNews/HR): ಮಳೆ ಅನಾಹುತದಿಂದಾಗಿ ಬ್ರಾಂಡ್ ಬೆಂಗಳೂರು ಹೆಸರಿಗೆ ಆತಂಕ ಸೃಷ್ಟಿಯಾಗಿದ್ದು, ಈ ನಿಟ್ಟಿನಲ್ಲಿ ದಿಟ್ಟ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮಾಜಿ ಸಿಎಂ ಎಸ್.ಎಂ. ಕೃಷ್ಣ ಬರೆದಿರುವ ಪತ್ರಗೆ ಸಂಬಂಧಿಸಿದಂತೆ ಟಾಂಗ್ ನೀಡಿರುವ ಹೆಚ್.ಡಿ.ಕುಮಾರಸ್ವಾಮಿ ಸೂಟು ಬೂಟು ಹಾಕಿಕೊಂಡರೆ ಬ್ರಾಂಡ್ ಬೆಂಗಳೂರು ಆಗಲ್ಲ ಎಂದು ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಹೆಚ್ಡಿಕೆ, ಎಸ್.ಎಂ. ಕೃಷ್ಣ ಕಾಲದಲ್ಲಿ ಬೆಂಗಳೂರಿಗೆ ಬ್ರಾಂಡ್ ಎಲ್ಲಿತ್ತು? ದೇವೇಗೌಡರ ಕಾಲದಲ್ಲಿ ಬ್ರಾಂಡ್ ಬೆಂಗಳೂರು ಬಂದಿದ್ದು. ಬ್ರಾಂಡ್ ಬೆಂಗಳೂರು ಹೆಸರನ್ನು ಇವರು ಹೈಜಾಕ್ ಮಾಡಿದರು ಎಂದಿದ್ದಾರೆ.
ಇನ್ನು ರಾಜ್ಯದಲ್ಲಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮೊದಲೇ ಮುನ್ಸೂಚನೆ ನೀಡಿದ್ದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಬೆಂಗಳೂರಿನಲ್ಲಿ ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳು ಜಲಾವೃತವಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಸಿಎಂ ಬೊಮ್ಮಾಯಿ ಕಾಟಾಚಾರಕ್ಕೆ ನಗರ ಪ್ರದಕ್ಷಿಣೆ ಹಾಕುತ್ತಿದ್ದಾರೆ ಎಂದು ವಾಹ್ದಾಳಿ ನಡೆಸಿದ್ದಾರೆ.