ಬೆಂಗಳೂರು, ಮೇ 19 (DaijiworldNews/DB): ಮಳೆ ಅವಾಂತರದಿಂದ ಬೆಂಗಳೂರಿನ ಖ್ಯಾತಿಗೆ ಆಗುತ್ತಿರುವ ಧಕ್ಕೆಯನ್ನು ಸರಿಪಡಿಸಿ ಬ್ರ್ಯಾಂಡ್ ಬೆಂಗಳೂರನ್ನು ಉಳಿಸಿಕೊಳ್ಳುವ ಕುರಿತು ಸಲಹೆ ನೀಡಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯಾದ್ಯಂತ ಪೂರ್ವ ಮುಂಗಾರು ಬಿರುಸುಗೊಂಡಿದ್ದು, ಬೆಂಗಳೂರಿನಲ್ಲಿ ಅನಾಹುತಗಳನ್ನೇ ಸೃಷ್ಟಿಸಿದೆ. ಇದರಿಂದ ಬ್ರಾಂಡ್ ಬೆಂಗಳೂರು ಹೆಸರಿಗೆ ಆತಂಕ ಸೃಷ್ಟಿಯಾಗಿದೆ. ಕೈಗಾರಿಕೆ ಸ್ಥಾಪನೆ, ರಾಜ್ಯದಲ್ಲಿ ಬಂಡವಾಳ ಹೂಡುವ ಹೂಡಿಕೆದಾರರಿಗೆ ಇದು ತಪ್ಪು ಸಂದೇಶ ರವಾನಿಸಬಹುದು. ಹಾಗಾಗಿ ಅಂತಹವುಗಳು ಬೇರೆ ರಾಜ್ಯಗಳ ಪಾಲಾಗುವ ಆತಂಕ ನಿವಾರಿಸಲು ಕೆಲವೊಂದು ಅಗತ್ಯ ನಿರ್ಧಾರಗಳನ್ನು ಸರ್ಕಾರ ಕೈಗೊಳ್ಳಬೇಕು ಎಂದವರು ಸಲಹೆ ರೂಪದಲ್ಲಿ ಪತ್ರ ಬರೆದಿದ್ದಾರೆ.
*ನಾನು ಮುಖ್ಯಮಂತ್ರಿಯಾಗಿದ್ದಾಗ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಆದ್ಯತೆ ನೀಡಿದ್ದೆ. ಇದರಿಂದ ಅಮೆರಿಕದ ಕ್ಯಾಲಿಫೋರ್ನಿಯಾ ನಗರದ ಸಿಲಿಕಾನ್ ವ್ಯಾಲಿಗೆ ಪರ್ಯಾಯವಾಗಿ ಬೆಂಗಳೂರು ನಗರ ಬೆಳೆಯಿತಲ್ಲದೆ, ಯುವಕರಿಗೆ ಲಕ್ಷಾಂತರ ಉದ್ಯೋಗ ಸೃಷ್ಟಿಯಾಯಿತು. ಹೀಗಾಗಿ ಇಂದು ಬೆಂಗಳೂರು ಬೃಹದಾಕಾರವಾಗಿ ಬೆಳೆದಿದೆ. ಹೀಗಾಗಿ ಭವಿಷ್ಯದಲ್ಲಿ ನಗರ ಇನ್ನಷ್ಟು ಬೆಳೆಯಲು ದೂರಗಾಮಿ ದೃಷ್ಟಿಯಿಂದ ಶಾಶ್ವತ ಕಾರ್ಯ ರೂಪಿಸುವುದು ಅಗತ್ಯವಾಗಿದೆ. ಅವುಗಳ ಪೈಕಿ ಕೆಲವನ್ನು ಇಲ್ಲಿ ಸಲಹೆ ರೂಪದಲ್ಲಿ ಪಟ್ಟಿ ಮಾಡಿ ನೀಡಿದ್ದೇನೆ ಎಂದವರು ಪಟ್ಟಿಯನ್ನು ಕಳುಹಿಸಿಕೊಟ್ಟಿದ್ದಾರೆ.
*ನಾನು ರಾಜ್ಯದ ಸಿಎಂ ಆಗಿದ್ದ ವೇಳೆ ಬೆಂಗಳೂರಿನ ಅಭಿವೃದ್ಧಿಗಾಗಿ ರಚಿಸಲಾಗಿದ್ದ ಬೆಂಗಳೂರು ಅಜೆಂಡಾ ಟಾಸ್ಕ್ ಫೋರ್ಸ್ ಸಮಿತಿಯನ್ನು ಪುನಾರಚಿಸಬೇಕು. ಇದಕ್ಕೆ ವಿವಿಧ ವಿಭಾಗಗಳ ತಜ್ಞರನ್ನು ಒಟ್ಟು ಸೇರಿಸಿ ಅವರ ಸಲಹೆ ಮೇರೆಗೆ ಬೆಂಗಳೂರು ಅಭಿವೃದ್ದಿಗಾಗಿ ನೀಲನಕ್ಷೆ ತಯಾರಿಸಬೇಕು.
*ನಗರ ವ್ಯಾಪ್ತಿಯ ಒಳಚರಂಡಿ ವ್ಯವಸ್ಥೆ ಸುಧಾರಿಸಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಬಡಾವಣೆಗಳಲ್ಲಿ ಮೂಲಸೌಕರ್ಯ ಅಭಿವೃದ್ದಿ ಮಾಡಬೇಕು. ಇದಕ್ಕೆ ತಜ್ಞರ ತಂಡ ರಚಿಸಬೇಕು. ಅಲ್ಲದೆ ರಾಜಕಾಲುವೆ ನಿರ್ವಹಣೆಗೆ ಅಗತ್ಯ ಪ್ರಾಮುಖ್ಯ ನೀಡಿ ಮುಂಗಾರು ಆಗಮನಕ್ಕೂ ಮುನ್ನ ಸಮರೋಪಾದಿಯಲ್ಲಿ ಕೆಲಸ ಕೈಗೊಳ್ಳಬೇಕು.
*ಬೆಂಗಳೂರಿನ ಮೇಲೆ ಒತ್ತಡ ತಗ್ಗಿಸುವ ಸಲುವಾಗಿ ಮೈಸೂರು, ತುಮಕೂರು, ಹುಬ್ಬಳ್ಳಿಯಂತಹ ನಗರಗಳನ್ನು ಗುರುತಿಸಿ ಕೈಗಾರಿಕಾ ವಸಾಹತು ಸ್ಥಾಪನೆಗೆ ಅವಕಾಶ ನೀಡಬೇಕು.
*ಅಲ್ಲದೆ ಬೆಂಗಳೂರು ವ್ಯಾಪ್ತಿಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡ ವಲಯವಾರು ಸಮಸ್ಯೆಗಳನ್ನು ಪತ್ತೆ ಹಚ್ಚಿಶಾಶ್ವತ ಪರಿಹಾರ ಕಂಡು ಕೊಳ್ಳುವುದು. ಅದಕ್ಕಾಗಿ ಅನುದಾನ ಕಲ್ಪಿಸುವುದು.
*ಇದಲ್ಲದೆ ರಾಜ್ಯದ ಅಭಿವೃದ್ದಿ ಮತ್ತು ಭವಿಷ್ಯದ ದೃಷ್ಟಿಯಿಂದ ಸರ್ವಪಕ್ಷಗಳ ಮುಖಂಡರ ಸಲಹೆ ಪಡೆದು ಕಾರ್ಯೋನ್ಮುಖರಾಗಬೇಕು ಎಂದು ಎಸ್.ಎಂ. ಕೃಷ್ಣ ಅವರು ಸಿಎಂ ಬೊಮ್ಮಾಯಿ ಅವರಿಗೆ ಸಲಹೆ ಮಾಡಿದ್ದಾರೆ.