ನವದೆಹಲಿ, ಮೇ 19 (DaijiworldNews/MS): ಭಯೋತ್ಪಾದನೆಗೆ ಹಣಕಾಸಿನ ನೆರವು ಪ್ರಕರಣದಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಅನ್ನು ದೋಷಿ ಎಂದು ದೆಹಲಿಯ ಎನ್ಐಎ ವಿಶೇಷ ನ್ಯಾಯಾಲಯ ಘೋಷಿಸಿದೆ.
ನ್ಯಾಯಾಲಯ ಯಾಸಿನ್ ಮಲಿಕ್ ಅವರ ಹಣಕಾಸಿನ ಮೌಲ್ಯಮಾಪನಕ್ಕೆ ಸಂಬಂಧಿಸಿದ ಅಫಿಡವಿಟ್ ಕೇಳಿದೆ. ಅಲ್ಲದೆ ಶಿಕ್ಷೆಯ ಪ್ರಮಾಣದ ಕುರಿತಾದ ವಿಚಾರಣೆಯನ್ನು ಮೇ 25ರಂದು ನ್ಯಾಯಾಲಯ ನಡೆಸಲಿದೆ.
ಕಠಿಣವಾದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ (ಯುಎಪಿಎ) ಅಡಿಯಲ್ಲಿ ದಾಖಲಾದ ಪ್ರಕರಣಗಳು ಸೇರಿದಂತೆ ಎಲ್ಲ ಆರೋಪಗಳಲ್ಲಿಯೂ ತಾನು ತಪ್ಪಿತಸ್ಥ ಎಂದು ಮೇ 10ರಂದು ಮಲಿಕ್ ತಪ್ಪೊಪ್ಪಿಗೆ ನೀಡಿದ್ದ. 2017ರಲ್ಲಿ ಕಾಶ್ಮೀರ ಕಣಿವೆಯಲ್ಲಿ ನಡೆದ ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದ ಚಟುವಟಿಕೆಯ ಆರೋಪಕ್ಕೆ ಸಂಬಂಧಿಸಿದಂತೆ ಈ ಪ್ರಕರಣ ದಾಖಲಾಗಿತ್ತು.