ಬೆಂಗಳೂರು, ಮೇ 19 (DaijiworldNews/MS): ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್ಎಸ್ಎಸ್) ಸಂಸ್ಥಾಪಕ ಕೇಶವ್ ಬಲಿರಾಮ್ ಹೆಡ್ಗೆವಾರ್ ಅವರ ಭಾಷಣವನ್ನು 2022-23ನೇ ಸಾಲಿನ ಹತ್ತನೆಯ ತರಗತಿಯ ಶೈಕ್ಷಣಿಕ ವರ್ಷದ ಕನ್ನಡ ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡಿರುವ ಬಗ್ಗೆ ಕಾಂಗ್ರೆಸ್ ಟೀಕಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಸುನಿಲ್ ಕುಮಾರ್ ಕಾಂಗ್ರೆಸ್ ಗೆ ಹೆಡ್ಗೆವಾರ್ ಕಂಡರೆ ಭಯ ಯಾಕೆ ? ಎಂದು ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ನಾರಾಯಣ ಗುರು, ಭಗತ್ ಸಿಂಗ್ ರ ಪಾಠವನ್ನು ಪಠ್ಯದಿಂದ ತೆಗೆದು ಹಾಕಿಲ್ಲ. ಕೆಲವರು ಸುಳ್ಳು ಸುದ್ದಿ ಹಬ್ಬುತ್ತಿದ್ದಾರೆ ಹೆಡ್ಗೆವಾರ್ ಭಾಷಣವನ್ನ ಪಠ್ಯದಲ್ಲಿ ಸೇರಿಸಿದರೆ ತಪ್ಪೇನಿದೆ ? ಇದಕ್ಕೆ ಕಾಂಗ್ರೆಸ್ ಏಕೆ ಭಯಪಡಬೇಕು . ಇಂದು ಹೆಡ್ಗೆವಾರ್ ಅವರ ಪ್ರೇರಣೆಯಿಂದಲೇ ಕೋಟ್ಯಂತರ ಜನ ದೇಶಪ್ರೇಮದ ಕೆಲಸ ಮಾಡುತ್ತಿದ್ದಾರೆ ಎಂದು ಸಮಜಾಯಿಷಿ ನೀಡಿದರು.
ಸಮಾಜ ಸುಧಾರಕ ನಾರಾಯಣ ಗುರುಗಳನ್ನ ಪಾಠವನ್ನು ತೆಗೆದುಹಾಕಿಲ್ಲ, ಕೆಲವರು ತಪ್ಪು ಮಾಹಿತಿ ಹರಡುತ್ತಿದ್ದಾರೆ. ಈ ಕುರಿತು ನಾನೇ ಖುದ್ದು ಸ್ವತಃ ಶಿಕ್ಷಣ ಸಚಿವರು, ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನ್ನಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.