ಕೊಲ್ಲಂ, ಮೇ 19 (DaijiworldNews/DB): ಪತಿಯ ಮನೆಯಲ್ಲಿ ಕಳೆದ ವರ್ಷ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಯುವ ವೈದ್ಯೆ ವಿಸ್ಮಯ ಅವರ ಹೆಸರಿನಲ್ಲಿ ಅಪರಿಚಿತರು ಫೇಸ್ಬುಕ್ ಖಾತೆ ತೆರೆದಿರುವ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ವರ್ಷ ಜೂನ್ ತಿಂಗಳಲ್ಲಿ ವಿಸ್ಮಯ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ವಿಸ್ಮಯ ಫೋಟೋ ಬಳಸಿಕೊಂಡು ವಿಸ್ಮಯ ವಿಜಿತ್ ಹೆಸರಿನಲ್ಲಿ ಅಪರಿಚಿತರು ಯಾರೋ ಫೇಸ್ಬುಕ್ ಖಾತೆ ತೆರೆದಿದ್ದು, ಸುಮಾರು 800 ಮಂದಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾರೆ. ಇದರಿಂದ ಆತಂಕಗೊಂಡ ವಿಸ್ಮಯ ಕುಟುಂಬ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಖಲಿಸಿದ್ದಾರೆ. ನ್ಯಾಯಾಲಯದಲ್ಲಿ ವಿಸ್ಮಯ ಪ್ರಕರಣ ವಿಚಾರಣೆ ವೇಳೆ ಆಕೆಯ ತಂದೆ ನಿರ್ವಹಿಸದ ಇನ್ಸ್ಟಾಗ್ರಾಂ ಖಾತೆ ಕುರಿತು ವಾದ ಮಂಡಿಸಲಾಗಿದ್ದು, ಇದೇ ಆಧಾರದಲ್ಲಿ ದೂರು ನೀಡಲಾಗಿದೆ. ಇದೀಗ ಕೇರಳ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕೇರಳದಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ್ದ ವಿಸ್ಮಯ ಆತ್ಮಹತ್ಯೆ ಪ್ರಕರಣದ ವಿಚಾರಣೆ ಕೊಲ್ಲಂನ ಒಂದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಪೂರ್ಣಗೊಂಡಿದ್ದು, ಮೇ 23ರಂದು ತೀರ್ಪು ಹೊರಬೀಳಲಿದೆ. ತೀರ್ಪು ಬರುವುದಕ್ಕೆ ಕೆಲವೇ ದಿನಕ್ಕೆ ಮುನ್ನ ಆಕೆಯ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆಯಲಾಗಿದೆ.
ಏನಿದು ಪ್ರಕರಣ?
2020ರ ಮೇ ತಿಂಗಳಲ್ಲಿ ಯುವ ವೈದ್ಯೆ ವಿಸ್ಮಯ ಅವರು ಕೇರಳದ ಮೋಟಾರು ವಾಹನ ವಿಭಾಗದ ಅಧಿಕಾರಿಯಾಗಿದ್ದ ಕಿರಣ್ಕುಮಾರ್ ಎಂಬಾತನನ್ನು ವರಿಸಿದ್ದರು. ಉತ್ತಮ ಉದ್ಯೋಗ, ಕೈತುಂಬ ಸಂಬಳ ಪಡೆಯುತ್ತಿದ್ದ ಆತ ಹಣದ ದುರಾಸೆಗೆ ಬಿದ್ದು ನಿತ್ಯ ಪತ್ನಿಗೆ ಕಿರುಕುಳ ನೀಡುತ್ತಿದ್ದ, ಇದರಿಂದ ಬೇಸತ್ತ ಪತ್ನಿ ವಿಸ್ಮಯ ಮದುವೆಯಾದ ಒಂದೇ ವರ್ಷಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರು. 2021 ಜೂನ್ 21ರಂದು ಗಂಡನ ಮನೆಯಲ್ಲಿಯೇ ನೇಣುಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಆದರೆ ಆಕೆಯ ದೇಹದ ಮೇಲೆ ಗಾಯದ ಗುರುತುಗಳಿದ್ದವು. ಬಳಿಕ ಆಕೆಯ ಪತಿಯನ್ನು ಬಂಧಿಸಲಾಗಿತ್ತು. ಅಲ್ಲದೆ, ಆತನನ್ನು ಸರ್ಕಾರಿ ಉದ್ಯೋಗದಿಂದ ತೆಗೆದು ಹಾಕಲಾಗಿತ್ತು. ಬಳಿಕ ಆರೋಪಿ ಜಾಮೀನಿನ ಮೇಲೆ ಹೊರ ಬಂದಿದ್ದ.