ಬೆಂಗಳೂರು, ಮೇ 19 (DaijiworldNews/HR): 2021-2022ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದೆ. ಇಂದು ಮಲ್ಲೇಶ್ವರದಲ್ಲಿರುವ ಫ್ರೌಡಶಾಲಾ ಪರೀಕ್ಷಾ ಮಂಡಳಿಯಲ್ಲಿ ನಿಗದಿಪಡಿಸಿದ್ದ ಪತ್ರಿಕಾಗೋಷ್ಟಿ ಮೂಲಕ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಸಚಿವ ಬಿ.ಸಿ ನಾಗೇಶ್ ಫಲಿತಾಂಶ ಪ್ರಕಟಿಸಿದ್ದು, ಈ ಬಾರಿ 85.63% ಫಲಿತಾಂಶ ದಾಖಲಾಗಿದೆ.
ಒಟ್ಟು 8,53,436 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 7,30,881 ಮಂದಿ ಪಾಸ್ ಆಗಿದ್ದಾರೆ. ಇದರಲ್ಲಿ 3,72,279 ಹೆಣ್ಣುಮಕ್ಕಳು, 3,58,602 ಗಂಡು ಮಕ್ಕಳು ಉತ್ತೀರ್ಣರಾಗಿದ್ದಾರೆ.
ಇನ್ನು ಒಟ್ಟು 145 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ಮೊದಲ ಸ್ಥಾನ ಪಡೆದಿದ್ದಾರೆ. ಇನ್ನು 309 ವಿದ್ಯಾರ್ಥಿಗಳು 625ಕ್ಕೆ 624 ಅಂಕ ಪಡೆಯುವ ಮೂಲಕ 2ನೇ ಸ್ಥಾನ ಪಡೆದಿದ್ದಾರೆ.
ಉಳಿದಂತೆ 623 ಅಂಕಗಳನ್ನು 422 ವಿದ್ಯಾರ್ಥಿಗಳು, 622 ಅಂಕಗಳನ್ನು 615 ವಿದ್ಯಾರ್ಥಿಗಳು, 621 ಅಂಕಗಳನ್ನು 706 ವಿದ್ಯಾರ್ಥಿಗಳು, 620 ಅಂಕವನ್ನು 704 ವಿದ್ಯಾರ್ಥಿಗಳು ತೆಗೆದುಕೊಂಡಿದ್ದಾರೆ.
ರಾಜ್ಯದ 3920 ಶಾಲೆಗಳಿಗೆ ಶೇ.100 ಫಲಿತಾಂಶ ಸಿಕ್ಕಿದೆ. 20 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.
ಇನ್ನು ಯಾವ ಜಿಲ್ಲೆ ಮೊದಲು ಯಾವ ಜಿಲ್ಲೆ ಲಾಸ್ಟ್ ಎನ್ನುವ ವಿಂಗಡಣೆ ಈ ಬಾರಿ ಇಲ್ಲವಾಗಿದ್ದು, ಶಾಲೆಗಳಿಗೆ ಗ್ರೇಡ್ ವೈಸ್ ಫಲಿತಾಂಶದ ವಿವರವನ್ನು ನೀಡಲಾಗಿದೆ.
ಎಸ್ಎಸ್ಎಲ್ಸಿ ಫಲಿತಾಂಶ ಇಲಾಖೆಯ ವೆಬ್ಸೈಟ್ನಲ್ಲಿ ಲಭ್ಯವಾಗಲಿದೆ.ಶಿಕ್ಷಣ ಸಚಿವರು 12.30ಕ್ಕೆೆ ಫಲಿತಾಂಶವನ್ನು ಘೋಷಿಸಿದ ಬಳಿಕ ಮಧ್ಯಾಹ್ನ 1 ಗಂಟೆ ನಂತರ ಇಲಾಖೆಯ ವೆಬ್ಸೈಟ್ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.
ಫಲಿತಾಂಶವನ್ನು http://kseeb.kar.ini.in ಅಥವಾ http://sslc.karnataka.gov.in ಅಥವಾ http://karresults.nic.in. ಮೂಲಕ ವೀಕ್ಷಿಸಬಹುದಾಗಿದೆ.
ರಾಜ್ಯದಲ್ಲಿ ಒಟ್ಟು 15,387 ಶಾಲೆಗಳಿಂದ 8,73,8846 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು ಅದರಲ್ಲಿ 4,52,732 ಗಂಡುಮಕ್ಕಳು, 4,21,110 ಹೆಣ್ಣುಮಕ್ಕಳು ಮತ್ತು 4 ವಿದ್ಯಾರ್ಥಿಗಳು ತೃತೀಯ ಲಿಂಗಿಗಳಿದ್ದಾರೆ ಹಾಗೂ ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು 5,307 ಇದ್ದು, ಈ ಪೈಕಿ ಬೆರಳೆಣಿಕೆಯ ವಿದ್ಯಾರ್ಥಿಗಳಷ್ಟೇ ಪರೀಕ್ಷೆಗೆ ಗೈರಾಗಿದ್ದರು.