ಮೈಸೂರು, ಮೇ 19 (DaijiworldNews/DB): ಕೆ.ಆರ್.ಎಸ್. ಕಟ್ಟಿದ ನಾಲ್ವಡಿ ಕೃಷ್ಣ ರಾಜ್ ಒಡೆಯರ್ ಅವರೇ ಮೈಸೂರು ಹುಲಿ ಹೊರತು ಟಿಪ್ಪು ಅಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ನಾಲ್ವಡಿ ಕೃಷ್ಣ ರಾಜ್ ಒಡೆಯರ್ ಬೆಂಗಳೂರಿಗೆ ವಿದ್ಯುತ್ ಸಂಪರ್ಕ ಕಲ್ಪಸಿದವರು. ಕೆ.ಆರ್.ಎಸ್.ನ್ನು ನಮಗೆ ನೀಡಿದವರು. ಆದರೆ ಟಿಪ್ಪುವಿನ ಕೊಡುಗೆ ಏನಿದೆ ಎಂದು ಪ್ರಶ್ನಿಸಿದರು.
ಪೋಸ್ಟರ್ಗಳಲ್ಲಿ ಹುಲಿ ಚಿತ್ರ ಹಾಕಿದರೆ ಅವನು ಹುಲಿ ಆಗುವುದಿಲ್ಲ. ಮೂರನೇ ಮತ್ತು ನಾಲ್ಕನೇ ಆಂಗ್ಲೋ ಮೈಸೂರು ಯುದ್ದದಲ್ಲಿ ಈ ಹುಲಿ ಎಲ್ಲಿತ್ತು? ಯುದ್ದ ಮಾಡದೆ ಸಂಧಾನಕ್ಕೆ ಕಳುಹಿಸಿದ ಟಿಪ್ಪು ಸುಲ್ತಾನ್ ಹುಲಿ ಹೇಗೆ ಆಗುತ್ತಾನೆ? ಆತ ಸತ್ತಿದ್ದು ಕೋಟೆಯೊಳಗೆ. ಆದರೆ ಬೋನ್ನೊಳಗೆ ಹುಲಿ ಎಂದಿಗೂ ಸಾಯುವುದಿಲ್ಲ. ನಾಲ್ಕು ಮಂದಿ ಹುಲಿ ಎಂದ ಮಾತ್ರಕ್ಕೆ ಅವನು ಮೈಸೂರಿನ ಹುಲಿ ಆಗುವುದಿಲ್ಲ. ಜನರಿಗೆ ಸಹಾಯವಾಗುವ ಕಾರ್ಯ ಮಾಡಿದ ಒಡೆಯರ್ ನಮಗೆ ಎಂದಿಗೂ ಮೈಸೂರಿನ ಹುಲಿ ಎಂದರು.
ಮತ್ತೊಮ್ಮೆ ಸಿಎಂ ಆದರೆ ದಲಿತರ ಸಾಲ ಮನ್ನಾ ಮಾಡುವುದಾಗಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಯಾವ ರಾಜ್ಯದಲ್ಲಿ ಮುಖ್ಯಮಂತ್ರಿಯಾಗುತ್ತಾರೆಂಬುದು ನನಗೆ ಗೊತ್ತಿಲ್ಲ. ಅವರು ದಲಿತರಿಗೆ ಕೊಟ್ಟ ಬಹುದೊಡ್ಡ ಕೊಡುಗೆ ಎಂದರೆ ಡಾ. ಜಿ. ಪರಮೇಶ್ವರ್ ಸಿಎಂ ಆಗುವುದನ್ನು ತಪ್ಪಿಸಿದ್ದು, ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಕ್ರಮವಾಗಿ ಕೋಲಾರ ಹಾಗೂ ಕಲಬುರಗಿಯಲ್ಲಿ ಸೋಲಿಸಿದ್ದು. ಸಿದ್ದರಾಮಯ್ಯ ಅವರಿಗೆ ಮುಸ್ಲಿಮರ ಮೇಲಿರುವ ಕಾಳಜಿ ದಲಿತರ ಮೇಲಿಲ್ಲ ಎಂಬುದು ಪ್ರಜ್ಞಾವಂತ ದಲಿತ ಸಮುದಾಯಕ್ಕೆ ತಿಳಿಯದ ವಿಚಾರವಲ್ಲ ಎಂದು ತಿಳಿಸಿದರು.
ಪಠ್ಯ ಪುಸ್ತಕದಿಂದ ಭಗತ್ ಸಿಂಗ್, ನಾರಾಯಣಗುರು ಅವರ ಪಠ್ಯವನ್ನ ಕೈ ಬಿಡಲಾಗಿದೆ ಎಂದು ಕಾಂಗ್ರೆಸ್ ವಿನಾಕಾರಣ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಆ ಪಕ್ಷಕ್ಕೆ ಭಗತ್ ಸಿಂಗ್ ಮೇಲೆ ದಿಡೀರ್ ಪ್ರೀತಿ ಹುಟ್ಟಿದ್ದು ಹೇಗೆಂಬುದೇ ಅರ್ಥವಾಗುತ್ತಿಲ್ಲ. ಭಗತ್ ಸಿಂಗ್ ಪಾಠ ಪಠ್ಯದಿಂದ ತೆಗೆಯಲಾಗಿಲ್ಲ. ನಾರಾಯಣಗುರು ಅವರ ಕುರಿತ ಪಾಠ ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ವರ್ಗಾವಣೆಯಾಗಿದೆಯಷ್ಟೆ ಎಂದು ತಿಳಿಸಿದರು.
ಆರೆಸ್ಸೆಸ್ ಸಂಸ್ಥಾಪಕ ಹೆಡಗೆವಾರ್ ಅವರು ದೇಶಪ್ರೇಮದ ಬಗ್ಗೆ ಮಾಡಿದ ಭಾಷಣವನ್ನು ಪಠ್ಯದಲ್ಲಿ ಅಳವಡಿಸಿದರೆ ತಪ್ಪೇನಿಲ್ಲ. ಶ್ರೇಷ್ಠ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ರಚಿಸಿದ ಪಠ್ಯ ಮಕ್ಕಳಲ್ಲಿ ದೇಶಭಕ್ತಿ ಹೆಚ್ಚಲು ಕಾರಣವಾಗಲಿದೆ. ಆದರೆ ದೇಶಭಕ್ತಿ ಬೆಳೆಸುವ ಪಠ್ಯದಲ್ಲಿ ಕಾಂಗ್ರೆಸ್ ತಪ್ಪು ಹುಡುಕುತ್ತಿದ್ದಾರೆ. ಆ ಪಕ್ಷ ದೇಶವಿರೋಧಿಯಾಗಿಯೇ ವರ್ತಿಸುತ್ತಿದೆ ಎಂದು ಪ್ರತಾಪ್ ಸಿಂಹ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರು.