ಬೆಂಗಳೂರು, ಮೇ 19 (DaijiworldNews/DB): ಇನ್ನೊಮ್ಮೆ ನನಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿದರೆ ದಲಿತರ ಸಾಲ ಮನ್ನಾ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ವಸಂತನಗರ ಬಳಿ ಇರುವ ಅಂಬೇಡ್ಕರ್ ಭವನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಶೋಷಿತರ ಸ್ವಾಭಿಮಾನ ಸಮಾವೇಶದಲ್ಲಿ ಅವರು ಮಾತನಾಡಿದರು.
ದಲಿತರಿಗೆ ಗುತ್ತಿಗೆ ಮೀಸಲಾತಿ ವ್ಯವಸ್ಥೆ ತಂದಿರುವುದು ನಾನೇ. 50 ಲಕ್ಷದಿಂದ 1 ಕೋಟಿ ರೂ. ಹೆಚ್ಚಳಕ್ಕೆ ಘೋಷಿಸಿದ್ದೆಯಾದರೂ ಆನಂತರದ ಯಾವುದೇ ಮುಖ್ಯಮಂತ್ರಿಗಳನ್ನು ಅದನ್ನು ತಮ್ಮ ಕಾರ್ಯಕ್ರಮದಲ್ಲಿ ಹಾಕಿಕೊಳ್ಳಲಿಲ್ಲ. ಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿಯವರೂ ಈ ಬಗ್ಗೆ ಗಮನ ನೀಡಲಿಲ್ಲ ಎಂದರು.
ಎಸ್ಸಿಪಿ, ಟಿಎಸ್ಪಿ 7,950 ಕೋಟಿ ರೂ. ಹಣವನ್ನು ಡೈವರ್ಟ್ ಮಾಡಲಾಗಿದೆ ಎಂದು ಆರೋಪಿಸಿದ ಅವರು, ಇದು ಸರ್ಕಾರವು ದಲಿತರಿಗೆ ಮಾಡಿದ ಮೋಸವಾಗಿದೆ. ದಲಿತ ಸಮುದಾಯದ ಹಣವನ್ನು ಬೇರೆಯವರಿಗೆ ಖರ್ಚು ಮಾಡಲಾಗುತ್ತಿದೆ. ಆದರೆ ಈ ಬಗ್ಗೆ ಮಾತನಾಡದೆ ದಲಿತ ಸಂಘಟನೆಗಳು ಮೌನವಹಿಸಿರುವುದು ಸರಿಯಲ್ಲ. ಸೇರಬೇಕಾದ ಹಣದ ಬಗ್ಗೆ ಧ್ವನಿ ಎತ್ತದಿರುವುದು ಸಮಯದಾಯಕ್ಕೆ ಮಾಡಿದ ಮೋಸವಾಗುತ್ತದೆ ಎಂದು ತಿಳಿಸಿದರು.
ನ್ಯಾ. ಎಚ್.ಎನ್. ನಾಗಮೋಹನ್ ದಾಸ್ ಮಾತನಾಡಿ, ಪ್ರಸ್ತುತ ವಾತಾವರಣವನ್ನು ಗಮನಿಸಿದರೆ ಸಂವಿಧಾನ ಗಂಡಾಂತರದಲ್ಲಿದೆ ಎನಿಸುವುದು ಸಹಜ. ಸಂವಿಧಾನ ಬದಲಾವಣೆಗೆ ಹೊರಟಿರುವುದು ಅಕ್ಷಮ್ಯ. ರಾಜ್ಯವು ಕೋಮುವಾದದ ಪ್ರಯೋಗಶಾಲೆಯಾಗುತ್ತಿರುವುದು ದುರಂತ. ಿಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಂವಿಧಾನವನ್ನು ಉಳಿಸಬೇಕಾದ ಗುರುತರ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಅಭಿಪ್ರಾಯಪಟ್ಟರು.