ಜಮ್ಮು, ಮೇ 19 (DaijiworldNews/DB): ಉಗ್ರನಿಂದ ಹತ್ಯೆಗೊಳಗಾದ ಕಾಶ್ಮೀರಿ ಪಂಡಿತ ರಾಹುಲ್ ಭಟ್ ಅವರ ಕುಟುಂಬಕ್ಕೆ 5 ಲಕ್ಷ ರೂ. ನೆರವು ಮತ್ತು ಕುಟುಂಬದ ಓರ್ವ ಸದಸ್ಯನಿಗೆ ಸರ್ಕಾರಿ ನೌಕರಿಯನ್ನು ಬುಡ್ಗಾಂ ಜಿಲ್ಲಾಡಳಿತ ನೀಡಿದೆ.
ಜಮ್ಮು ಮತ್ತು ಕಾಶ್ಮೀರದ ಬುಡ್ಗಾಂ ಜಿಲ್ಲೆಯ ಚದೂರ ತಹಶೀಲ್ ಕಚೇರಿಯಲ್ಲಿ ಕರ್ತವ್ಯನಿರತರಾಗಿದ್ದ ರಾಹುಲ್ ಭಟ್ ಅವರನ್ನು ಉಗ್ರನೋರ್ವ ಗುಂಡಿಕ್ಕಿ ಹತ್ಯೆ ಮಾಡಿದ್ದನು. ಈ ಘಟನೆಯಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ತಲ್ಲಣ ಸೃಷ್ಟಿಯಾಗಿತ್ತು. ಇದೀಗ ಅಲ್ಲಿನ ಜಿಲ್ಲಾಡಳಿತವು ರಾಹುಲ್ ಭಟ್ ಪತ್ನಿ ಮೀನಾಕ್ಷಿ ರೈನಾ ಅವರಿಗೆ ಜಮ್ಮುವಿನ ನೋವಬಾದ್ನ ಸರ್ಕಾರಿ ಶಾಲೆಯಲ್ಲಿ ನೌಕರಿ ನೀಡಿದೆ.
ಅಲ್ಲದೆ ಜಮ್ಮು ಡಿವಿಷನಲ್ ಕಮಿಷನರ್ ರಮೇಶ್ ಕುಮಾರ್ ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಕೇಶ್ ಸಿಂಗ್ ಅವರು ಆರ್ಥಿಕ ನೆರವಿನ ಚೆಕ್ ಮತ್ತು ನೌಕರಿಯ ನೇಮಕಾತಿ ಪತ್ರವನ್ನು ಭಟ್ ಪತ್ನಿ ಮೀನಾಕ್ಷಿ ಅವರಿಗೆ ಹಸ್ತಾಂತರಿಸಿದರು.