ನವದೆಹಲಿ, ಮೇ 19 (DaijiworldNews/HR): ದೆಹಲಿಯಿಂದ ಕೆಲ ದಿನಗಳ ಹಿಂದೆ ದಕ್ಷಿಣ ಕಾಣೆಯಾಗಿದ್ದ 13 ವರ್ಷದ ಬಾಲಕಿಯನ್ನು ಸಾಕೇತ್ ಮೆಟ್ರೊ ನಿಲ್ದಾಣದ ಬಳಿ ರಕ್ಷಿಸಲಾಗಿದ್ದು, ವಿಚಾರಣೆ ವೇಳೆ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವುದು ದೃಢಪಟ್ಟಿದ್ದು, ಓರ್ವ ಅಪ್ರಾಪ್ತ ಸೇರಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರನ್ನು ಮೋಹಿತ್ (20), ಆಕಾಶ್ (19), ಶಾರೂಖ್ (20), ಓರ್ವ ಅಪ್ರಾಪ್ತ ಎಂದು ಗುರುತಿಸಲಾಗಿದೆ.
ಬಾಲಕಿಯು ಏಪ್ರಿಲ್ 24ರ ಸಂಜೆ 5 ಗಂಟೆಗೆ ಮನೆಯಿಂದ ತೆರಳಿದ್ದು ಬಳಿಕ ವಾಪಸ್ ಆಗಿರಲಿಲ್ಲ. ಸ್ನೇಹಿತರು ಅಥವಾ ಸಂಬಂಧಿಕರ ಮನೆಗೆ ತೆರಳಿರಬಹುದೆಂದು ಪೋಷಕರು ಭಾವಿಸಿದ್ದರು. ರಾತ್ರಿಯಾದರೂ ಮಗಳು ಬಾರದಿದ್ದರಿಂದ ಭಯಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಇನ್ನು ಬಾಲಕಿಯನ್ನು ಕರೆದೊಯ್ದಿದ್ದ ಆರೋಪಿ ಬಗ್ಗೆ ಮಾಹಿತಿದಾರರಿಂದ ಮಾಹಿತಿ ಸಿಕ್ಕಿದ್ದು, ಬಳಿಕ ಆತನನ್ನು ಬಂಧಿಸಿದ ಪೊಲೀಸರು ಆತ ನೀಡಿದ ಮಾಹಿತಿ ಮೇರೆಗೆ ಉಳಿದ ಮೂವರನ್ನು ಬಂಧಿಸಿದ್ದಾರೆ.
ಬಾಲಕಿಯನ್ನು ಸಾಕೆತ್ ಮೆಟ್ರೋ ನಿಲ್ದಾಣದ ಬಳಿ ನೋಡಿದ್ದಾಗಿ ಮಹಿಳೆಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಹೋದಾಗ ಬಾಲಕಿ ಮತ್ತಿನಲ್ಲಿದ್ದು, ಆಕೆಯನ್ನು ಪರೀಕ್ಷೆಗೆ ಒಳಪಡಿಸಿದಾಗ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.