ಹರಿಯಾಣ, ಮೇ 19 (DaijiworldNews/DB): ಚಾಲಕನ ನಿಯಂತ್ರಣ ತಪ್ಪಿ ಟ್ರಕ್ಕೊಂದು ರಸ್ತೆ ಪಕ್ಕದಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದವರ ಮೇಲೆ ಹರಿದ ಪರಿಣಾಮ ಮೂವರು ವಲಸೆ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಹರಿಯಾಣದ ಜಜ್ಜರ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ.
ಕುಂಡ್ಲಿ-ಮನೇಸರ್-ಪಲ್ವಾಲ್ ಮೋಟಾರು ಮಾರ್ಗದಲ್ಲಿ ಆಸೋಧ ಟೋಲ್ ಪ್ಲಾಜಾದಿಂದ 2 ಕಿಮೀ ದೂರದಲ್ಲಿ ಘಟನೆ ಸಂಭವಿಸಿದೆ. ಗಾಯಾಳುಗಳ ಪೈಕಿ ಹತ್ತು ಮಂದಿಯನ್ನು ಪಿಜಿಐ ರೋಹ್ಟಕ್ ಆಸ್ಪತ್ರೆಗೆ ಹಾಗೂ ಓರ್ವನನ್ನು ಬಹದ್ದೂರ್ಗಢದ ಟ್ರಾಮಾ ಸೆಂಟರ್ಗೆ ದಾಖಲಿಸಲಾಗಿದೆ. ಸಾವನ್ನಪ್ಪಿದ ಮೂವರು ಹಾಗೂ ಗಾಯಾಳುಗಳೆಲ್ಲರೂ ಕೆಎಂಪಿಯಲ್ಲಿ ದುರಸ್ತಿ ಕಾಮಗಾರಿ ನಡೆಸುವ ಕಾರ್ಮಿಕರು. ಕೆಲಸ ಮಾಡಿದ ಬಳಿಕ ವಿಶ್ರಾಂತಿಗಾಗಿ ರಸ್ತೆ ಬದಿ ಮಲಗಿದ್ದರು ಎನ್ನಲಾಗಿದೆ.
ಅಪಘಾತ ವಿಚಾರ ತಿಳಿದ ಕೂಡಲೇ ಸ್ಥಳೀಯ ಪೊಲೀಸರು ಸ್ಥಳಕ್ಕೆ ದಾವಿಸಿದ್ದಾರೆ. ಮೃತದೇಹಗಳನ್ನು ಬಹದ್ದೂರ್ಗಢ ಜನರಲ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.