ನವದೆಹಲಿ, ಮೇ 19 (DaijiworldNews/MS): ನೋಯ್ಡಾದಲ್ಲಿ ಅಪರಿಚಿತ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ 6 ವರ್ಷದ ಮಗು ರೋಲಿ ಪ್ರಜಾಪತಿಯ ಹೆತ್ತವರು ಮಗಳ ಅಂಗಾಂಗಗಳನ್ನು ದಾನ ಮಾಡಿ ಐದು ಜೀವಗಳನ್ನು ಉಳಿಸುವಲು ನೆರವಾಗಿದ್ದಾರೆ. ಇದಲ್ಲದೆ ರೋಲಿ ಪ್ರಜಾಪತಿಯ ನವದೆಹಲಿಯ ಏಮ್ಸ್ ಇತಿಹಾಸದಲ್ಲಿ ಅತ್ಯಂತ ಕಿರಿಯ ಅಂಗ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ.
ರೋಲಿ ತಲೆಗೆ ಗುಂಡೇಟು ತಗುಲಿದ್ದ ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯದ ತೀವ್ರತೆಯಿಂದಾಗಿ ಕೋಮಾಕ್ಕೆ ಜಾರಿದ್ದ ಬಾಲಕಿಯನ್ನು ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ಗೆ ಕರೆದೊಯ್ಯಲಾಯಿತು. ಪುಟ್ಟ ಬಾಲಕಿಯ ಜೀವ ಉಳಿಸಲು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾದ ನಂತರ, ವೈದ್ಯರು ಆಕೆಯ ಮೆದುಳು ನಿಷ್ಕ್ರೀಯಗೊಂಡಿದೆ ಎಂದು ಘೋಷಿಸಿದರು.
"ಆರೂವರೆ ವರ್ಷದ ಬಾಲಕಿ ರೋಲಿ ಏಪ್ರಿಲ್ 27 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಗುಂಡೇಟಿನ ತೀವ್ರತೆಗೆ ಬಾಲಕಿಯ ಮೆದುಳು ಸಂಪೂರ್ಣವಾಗಿ ಹಾನಿಗೊಂಡಿತ್ತು. ಚಿಕಿತ್ಸೆ ಫಲಕಾರಿಯಾಗದ ಕಾರಣ ನಾವು ಆಕೆಯ ಮೆದುಳು ನಿಷ್ಕ್ರೀಯಗೊಂಡಿತ್ತು. ನಮ್ಮ ವೈದ್ಯರ ತಂಡವು ಪೋಷಕರೊಂದಿಗೆ ಕುಳಿತು ಅಂಗಾಂಗ ದಾನದ ಬಗ್ಗೆ ಮಾತನಾಡಿ ಅವರ ಒಪ್ಪಿಗೆ ಪಡೆದರು. ಬಾಲಕಿಯ ಲಿವರ್, ಮೂತ್ರಪಿಂಡಗಳು, ಕಣ್ಣು ಮತ್ತು ಹೃದಯ ಕವಾಟದಿಂದಾಗಿ ಐದು ಮಂದಿಯ ಜೀವ ಉಳಿಸಲಾಗಿದೆ" ಎಂದು ಹಿರಿಯ ವೈದ್ಯ ಡಾ.ದೀಪಕ್ ಗುಪ್ತಾ ತಿಳಿಸಿದ್ದಾರೆ.
1994 ರಲ್ಲಿ ಏಮ್ಸ್ ನಲ್ಲಿ ಅಂಗಾಂಗ ದಾನ ಆರಂಭವಾದ ಬಳಿಕ ಅಂಗಾಂಗ ದಾನ ಮಾಡಿದ ಅತ್ಯಂತ ಕಿರಿಯಳಾಗಿ ರೋಲಿ ದಾಖಲೆಗೆ ಸೇರಿ ಇತಿಹಾಸ ನಿರ್ಮಿಸಿದ್ದಾಳೆ.