ಮೊರ್ಬಿ (ಗುಜರಾತ್), ಮೇ 18 (DaijiworldNews/DB): ಉಪ್ಪು ಕಾರ್ಖಾನೆಯ ಗೋಡೆ ಕುಸಿದು ಕನಿಷ್ಠ 12 ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಮೊರ್ಬಿಯ ಹಲ್ವಾಡ್ ಜಿಐಡಿಸಿಯಲ್ಲಿ ಬುಧವಾರ ನಡೆದಿದೆ.
ಹಲ್ವಾಡ್ ಜಿಐಡಿಸಿಯ ಸಾಗರ್ ಉಪ್ಪಿನ ಕಾರ್ಖಾನೆಯಲ್ಲಿ ಮಧ್ಯಾಹ್ನ ವೇಳೆಗೆ ಘಟನೆ ನಡೆದಿದೆ. ದುರಂತದಲ್ಲಿ ಹಲವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಘಟನೆ ಕುರಿತಂತೆ ವಿಷಾದ ವ್ಯಕ್ತಪಡಿಸಿರುವ ಸಚಿವ ಬ್ರಿಜೇಶ್ ಮೆರ್ಜ, ಸರ್ಕಾರ ಮೃತರ ಕುಟುಂಬಸ್ಥರ ನೆರವಿಗೆ ಧಾವಿಸಲಿದೆ ಎಂದಿದ್ದಾರೆ.
ಇನ್ನು ಘಟನೆ ಕುರಿತು ದುಃಖ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ. ಸಂತ್ರಸ್ತರಿಗೆ ಸ್ಥಳೀಯ ಅಧಿಕಾರಿಗಳು ಸರ್ವ ರೀತಿಯ ನೆರವು ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಪಿಎಂಎನ್ಆರ್ಎಫ್ ನಿಂದ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂ. ನೀಡಲಾಗುವುದು ಎಂದು ಪ್ರಧಾನ ಮಂತ್ರಿ ಸಚಿವಾಲಯ ತಿಳಿಸಿದೆ.