ನವದೆಹಲಿ, ಮೇ 18 (DaijiworldNews/MS): ತನ್ನ ಪುತ್ರಿ ಶೀನಾ ಬೋರಾಳನ್ನು ಹತ್ಯೆ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಕಳೆದ ಆರೂವರೆ ವರ್ಷಗಳಿಂದ ಜೈಲಿನಲ್ಲಿರುವ ಇಂದ್ರಾಣಿ ಮುಖರ್ಜಿಗೆ ಸುಪ್ರೀಂ ಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿದೆ.2015ರ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಮುಖರ್ಜಿ ಜೈಲಿನಲ್ಲಿದ್ದಾರೆ.
ಪ್ರಕರಣದ ಮತ್ತೊಬ್ಬ ಆರೋಪಿ ಪೀಟರ್ ಇಂದ್ರಾಣಿ ಮುಖರ್ಜಿ ಫೆಬ್ರವರಿ 2020 ರಿಂದ ಜಾಮೀನಿನ ಮೇಲಿದ್ದಾರೆ. ಅವರ ಮೇಲೆ ಹೇರಿರುವ ಎಲ್ಲಾ ಷರತ್ತುಗಳೂ ಇಂದ್ರಾಣಿ ಅವರಿಗೂ ಅನ್ವಯವಾಗುತ್ತವೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಇಂದ್ರಾಣಿ, ಆಕೆಯ ಮೊದಲ ಪತಿ ಸಂಜೀವ್ ಖನ್ನಾ, ಎರಡನೇ ಪತಿ ಮತ್ತು ಮಾಧ್ಯಮ ಕ್ಷೇತ್ರದ ಉದ್ಯಮಿ ಪೀಟರ್ ಮುಖರ್ಜಿ ಪ್ರಕರಣದ ಆರೋಪಿಗಳು. 2012ರ ಮೇ 23ರಂದು ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಪೆನ್ ತಾಲೂಕಿನಲ್ಲಿ 24 ವರ್ಷದ ಶೀನಾ ಬೋರಾ ಶವವಾಗಿ ಪತ್ತೆಯಾಗಿದ್ದರು.
ನವೆಂಬರ್ 2021 ರಲ್ಲಿ ಬಾಂಬೆ ಹೈಕೋರ್ಟ್ ಆಕೆಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ನೀಡಿದ ಆದೇಶದ ವಿರುದ್ಧ ಸಲ್ಲಿಸಲಾದ ವಿಶೇಷ ರಜೆ ಅರ್ಜಿಯಲ್ಲಿ ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಬಿಆರ್ ಗವಾಯಿ ಅವರನ್ನೊಳಗೊಂಡ ಪೀಠವು ಈ ಆದೇಶವನ್ನು ನೀಡಿದೆ ಎಂದು ವರದಿಯಾಗಿದೆ