ಮೈಸೂರು, ಮೇ 18 (DaijiworldNews/DB): ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರ್ಯವಾಗಿ ಸ್ಪರ್ಧಿಸಲಿದೆ. ಬೇರೆ ಪಕ್ಷಗಳನ್ನು ಬೆಂಬಲಿಸುವ ಪ್ರಶ್ನೆ ಇಲ್ಲ ಎಂದು ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮೈಸೂರಿನಲ್ಲಿ ಮಾತನಾಡಿದ ಅವರು, ಜೆಡಿಎಸ್ ಕಾಂಗ್ರೆಸ್ ಅಥವಾ ಬಿಜೆಪಿಯನ್ನು ಬೆಂಬಲಿಸುವುದಿಲ್ಲ. ಕೆಲವೇ ಮತಗಳ ಕೊರತೆ ಇದ್ದರೂ ಪಕ್ಷದಿಂದ ಅಭ್ಯರ್ಥಿಗಳು ಕಣಕ್ಕಿಳಿಯಲಿದೆ. ಆದರೆ ಹೆಚ್ಚುವರಿ ಮತಗಳನ್ನು ಹೊಂದಿರುವ ಆ ಪಕ್ಷಗಳು ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುವ ಬಗ್ಗೆ ನಿರ್ಧರಿಸಬೇಕು ಎಂದರು. ಜೆಡಿಎಸ್ ಸಂಸದೀಯ ಮಂಡಳಿ ಸಭೆಯ ಬಳಿಕ ಅಭ್ಯರ್ಥಿಗಳು ಯಾರೆಂಬುದು ನಿರ್ಧಾರವಾಗಲಿದೆ ಎಂದರು.
ಜೆಡಿಎಸ್ನ ಹಲವರು ತಮ್ಮ ಪಕ್ಷಗಳಿಗೆ ಬರಲಿದ್ದಾರೆ ಎಂಬ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಹೇಳಿಕೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎರಡೂ ಪಕ್ಷಗಳಿಗೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ವಿಶ್ವಾಸವಿಲ್ಲ. ಆದರೆ ಬೇರೆ ಪಕ್ಷಗಳಿಂದ ಯಾರೇ ಜೆಡಿಎಸ್ಗೆ ಬಂದರೂ ಅವರಿಗೆ ಪಕ್ಷದಿಂದ ಟಿಕೆಟ್, ಸ್ಥಾನ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪಕ್ಷ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 123 ಸ್ಥಾನ ಗಳಿಸುವ ವಿಶ್ವಾಸವಿದೆ ಎಂದು ಇದೇ ವೇಳೆ ಅವರು ತಿಳಿಸಿದರು.
ಆರ್ಥಿಕ ವಿಚಾರಕ್ಕಾಗಿ ರಾಮು ಅವರನ್ನು ಪರಿಷತ್ ಅಭ್ಯರ್ಥಿಯಾಗಿ ಜೆಡಿಎಸ್ ಕಣಕ್ಕಿಳಿಸುತ್ತಿದೆ ಎಂಬ ಎಂಎಲ್ ಸಿ ಮರಿತಿಬ್ಬೇಗೌಡ ಅವರ ಆರೋಪವನ್ನುಇದೇ ವೇಳೆ ಕುಮಾರಸ್ವಾಮಿ ತಳ್ಳಿಹಾಕಿದರು. ಯಾವುದೇ ಹಣಕಾಸು ಲೆಕ್ಕಾಚಾರ ಇಲ್ಲಿ ಇಲ್ಲ ಶಾಸಕರ ಒಮ್ಮತದ ಅಭಿಪ್ರಾಯದ ಮೇಲೆಯೇ ರಾಮು ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದರು.