ನವದೆಹಲಿ, ಮೇ 18 (DaijiworldNews/DB): ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಆರೋಪಿ ಎ.ಜಿ. ಪೆರಾರಿವಾಲನ್ ನನ್ನು ಬಿಡುಗಡೆಗೊಳಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ನೀಡಿದೆ.
ಈತ ಕಳೆದ 31 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಜೀವಾವಧಿ ಆರೋಪಿಗಳಲ್ಲಿ ಓರ್ವನಾಗಿದ್ದಾನೆ. ರಾಜೀವ್ ಹತ್ಯೆ ವೇಳೆ ಈತನಿಗೆ 19 ವರ್ಷ ವಯಸ್ಸಾಗಿತ್ತು. ಹತ್ಯೆಯ ಮಾಸ್ಟರ್ ಮೈಂಡ್ ಶಿವರಾಸನ್ಗೆ 9-ವೋಲ್ಟ್ ಬ್ಯಾಟರಿಗಳನ್ನು ಖರೀದಿಸಿದ್ದ ಆರೋಪ ಇವನ ಮೇಲಿತ್ತು. ಬಾಂಬ್ನಲ್ಲಿ ಬ್ಯಾಟರಿಗಳನ್ನು ಬಳಸಿ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಲಾಗಿತ್ತು. ಹೀಗಾಗಿ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು 1998 ರಲ್ಲಿ ಈತನಿಗೆ ಮರಣದಂಡನೆ ವಿಧಿಸಿತ್ತು. ಸುಪ್ರೀಂ ಕೋರ್ಟ್ ಕೂಡಾ ಈ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು. ಆದರೆ 2014 ರಲ್ಲಿ ಇದನ್ನು ಜೀವಾವಧಿ ಶಿಕ್ಷಕೆ ಪರಿವರ್ತಿಸಲಾಗಿದ್ದು, ಕಳೆದ ಮಾರ್ಚ್ನಲ್ಲಿ ಆತನಿಗೆ ಜಾಮೀನು ಲಭಿಸಿತ್ತು.
ಬಳಿಕ ಪೆರಾರಿವಾಲನ್ ಜೈಲಿನಿಂದ ಶೀಘ್ರ ಬಿಡುಗಡೆ ಕೋರಿ ಕೋರ್ಟ್ಗೆ ಮನವಿ ಸಲ್ಲಿಸಿದ್ದ. ಇದೀಗ ಕೋರ್ಟ್ ಆತನ ಬಿಡುಗಡೆ ಮಾಡಲಾಗುವುದು ಎಂದು ತೀರ್ಪಿತ್ತಿದೆ.