ಕಲಬುರ್ಗಿ, ಮೇ 18 (DaijiworldNews/MS): ಕಲಬುರ್ಗಿಯಲ್ಲಿ ಠಿಕಾಣಿ ಹೂಡಿ ನನ್ನನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದ ಆರ್ಎಸ್ಎಸ್ ತಂಡ ಈಗ ಪ್ರಿಯಾಂಕ್ ಖರ್ಗೆಯನ್ನು ಟಾರ್ಗೆಟ್ ಮಾಡುತ್ತಿದೆ ಎಂದು ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಿಜೆಪಿಯೂ ಸೈದ್ಧಾಂತಿಕ ಬಿಟ್ಟು ದ್ವೇಷ ರಾಜಕಾರಣಕ್ಕೆ ಮುಂದಾಗಿದ್ದಾರೆ. ನನ್ನನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಆರ್ಎಸ್ಎಸ್ ತಂಡ ಪ್ರಿಯಾಂಕ್ ಖರ್ಗೆ ಅವರನ್ನು ಗುರಿಯಾಗಿಸಿಕೊಂಡಿದ್ದು ಇದಕ್ಕಾಗಿ ಹುನ್ನಾರ ನಡೆಸುತ್ತಿದೆ ಎಂದು ದೂರಿದ್ದಾರೆ.
ಖರ್ಗೆಯವರೇ ನೀವು ಮುಂದೆ ಗೆಲ್ಲುತ್ತೀರೋ ಇಲ್ಲವೋ ಗೊತ್ತಿಲ್ಲ ಎಂದು ಸೂಚ್ಯವಾಗಿ ನನ್ನ ಸೋಲಿನ ಮುನ್ಸೂಚನೆ ಈ ಹಿಂದೆ ಸಂಸತ್ತಿನಲ್ಲಿ ಪ್ರಧಾನಿಯವರು ನೀಡಿದ್ದರು.ಈಗ ಅದೇ ಆರ್ಎಸ್ಎಸ್ ಪ್ರಾಯೋಜಿತ ರಾಜಕಾರಣ ಪ್ರಿಯಾಂಕ್ ಖರ್ಗೆ ಅವರನ್ನು ಟಾರ್ಗೆಟ್ ಮಾಡುತ್ತಿದ್ದು , ಅದೇ ಧಾಟಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೋಮವಾರ ಕಲಬುರಗಿ ಪ್ರವಾಸದಲ್ಲಿರುವಾಗ ಮಾತನಾಡಿದ್ದಾರೆ . ಇದಕ್ಕೂ ಮುನ್ನ ಆರ್ಎಸ್ಎಸ್ ಪ್ರಮುಖರಾದ ಮೋಹನ್ ಭಾಗವತ್ ಕಲಬುರ್ಗಿಗೆ ಬಂದಿದ್ದಾಗ ಪ್ರಿಯಾಂಕ್ ಅವರನ್ನು ಸೋಲಿಸುವಂತೆ ಕರೆ ಕೊಟ್ಟಿದ್ದಾರೆ ಎಂದು ಎಂದು ಆರೋಪಿಸಿದ್ದಾರೆ.