ಬೆಂಗಳೂರು, ಮೇ 17 (DaijiworldNews/HR): ಡಿ.ಕೆ. ಶಿವಕುಮಾರ್ ಅವರ ಹುಟ್ಟುಹಬ್ಬದ ಕೇಕ್ ತಿನ್ನಿಸುವಷ್ಟೂ ಪ್ರಿಯಾಂಕ ಗಾಂಧಿಗೆ ಸೌಜನ್ಯವಿಲ್ಲವೇ ಎಂದು ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ನೀವೆಷ್ಟೇ ಗುಲಾಮಗಿರಿ, ಚಮಚಾಗಿರಿ ಮಾಡಿದರೂ ನಕಲಿ ಗಾಂಧಿಗಳು ನಿಮ್ಮನ್ನು ಇಡುವಲ್ಲಿಯೇ ಇಡುತ್ತಾರೆ. ಹೈಕಮಾಂಡ್ ಮಟ್ಟದಲ್ಲಿ ಟ್ರಬಲ್ ಶೂಟರ್ ಎನಿಸಿಕೊಂಡಿರುವ ಡಿಕೆಶಿ ಅವರ ಹುಟ್ಟುಹಬ್ಬದ ಕೇಕ್ ತಿನ್ನಿಸುವಷ್ಟೂ ಪ್ರಿಯಾಂಕ ಗಾಂಧಿಗೆ ಸೌಜನ್ಯವಿಲ್ಲ. ಮತ್ತೊಬ್ಬರ ಕೈಯಲ್ಲಿ ಕೇಕ್ ತಿನ್ನಿಸುವ ಪ್ರಮೇಯವೇನಿತ್ತು? ಎಂದು ಪ್ರಶ್ನಿಸಿದೆ.
ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುವ ಈ ಹೊತ್ತಿನಲ್ಲಿ, ನಕಲಿ ಗಾಂಧಿ ವಂಶದವರು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರನ್ನು ಮೂರನೇ ದರ್ಜೆಯವರಂತೆ ನಡೆಸಿಕೊಳ್ಳುತ್ತಿದ್ದಾರೆ. ಕನಕಪುರದ ಬಂಡೆ ಹೀಗೆ ಬಗ್ಗಿದ್ದು, ಕುಗಿದ್ದು ಅಸಹಾಯಕತನದ ಪರಮಾವಧಿಯಲ್ಲದೆ ಮತ್ತೇನು? ಎಂದಿದೆ.
ಇನ್ನು ಕೇಕ್ ತಿನ್ನಿಸಲು ನಿರಾಕರಣೆ, ರಮ್ಯಾ ಟ್ವೀಟ್ ದಾಳಿ, ಎಂಬಿ ಪಾಟೀಲ್ ಸಿಡಿದೆದ್ದಿದ್ದು, ಸಿದ್ದರಾಮಯ್ಯ ಮತ್ತು ಬಣದ ಇತ್ತೀಚೆಗಿನ ನಡೆ, ಕೆಪಿಸಿಸಿ ಕಚೇರಿಯಲ್ಲಿ ಭ್ರಷ್ಟಾಚಾರದ ಆರೋಪ ಇದೆಲ್ಲವೂ ಡಿಕೆಶಿ ಅವರನ್ನು ಹರಕೆಯ ಕುರಿ ಮಾಡುವ ತಂತ್ರ. ಈ ಎಲ್ಲ ಘಟನೆಗಳು ಏನೋ ಮುನ್ಸೂಚನೆ ನೀಡುತ್ತಿರುವುದು ನಿಜವಲ್ಲವೇ? ಎಂದು ಪ್ರಶ್ನಿಸಿದೆ.