ಬೆಂಗಳೂರು, ಮೇ 17 (DaijiworldNews/HR): ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಕೈದಿಗೆ ಜಾಮೀನು ನೀಡಲು ಕುಟುಂಬ ಸದಸ್ಯರು ಬರಲಿಲ್ಲ ಎಂದು ಮಾನಸಿಕ ಖನ್ನತೆಗೊಳಗಾಗಿ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ಕೈದಿಯನ್ನು ಆಜಾದ್ ನಗರದ ಮನೋಜ್ ಅಲಿಯಾಸ್ ಹೂವು(36) ಎಂದು ಗುರುತಿಸಲಾಗಿದೆ.
ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ 8ನೇ ಬ್ಯಾರಕ್ನ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರಂಜಾನ್ ಸಮಯದಲ್ಲಿ ಕೆಲವು ಹುಡುಗರನ್ನು ಗುಂಪು ಸೇರಿಸಿಕೊಂಡು ಚಾಮರಾಜ ಪೇಟೆ ಠಾಣೆ ವ್ಯಾಪ್ತಿಯಲ್ಲಿ ಗಲಾಟೆ ಮಾಡುತ್ತಿದ್ದ. ಅಲ್ಲದೇ ಬೈಕ್ ಕಳವು ಪ್ರಕರಣವೊಂದರಲ್ಲಿ ಚಾಮರಾಜ ಪೇಟೆ ಪೊಲೀಸರು ಮನೋಜ್ನನ್ನು ಮೇ 1ರಂದು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದು, ಸೋಮವಾರ ಬೆಳಗ್ಗೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇನ್ನು ಪೊಲೀಸರು ಬಂಧಿಸಿದ ಬಳಿಕ ಮನೋಜ್ ಖನ್ನತೆಗೊಳಗಾಗಿದ್ದ. ತನ್ನ ಪೋಷಕರು ಅಥವಾ ಕುಟುಂಬಸ್ಥರ ಜಾಮೀನು ನೀಡಿ ಜೈಲಿನಿಂದ ಕರೆದುಕೊಂಡು ಹೋಗುತ್ತಾರೆ ಎಂದು ತಿಳಿದುಕೊಂಡಿದ್ದೆ. ಆದರೆ ಯಾರೊಬ್ಬರೂ ಜಾಮೀನು ನೀಡಲು ಮುಂದಾಗಿಲ್ಲ ಎಂದು ಸಹ ಕೈದಿಗಳ ಬಳಿ ಹೇಳಿಕೊಳ್ಳುತ್ತಿದ್ದ ಎನ್ನಲಾಗಿದೆ.
ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821