ಗುವಾಹತಿ, ಮೇ 17 (DaijiworldNews/HR): ಅಸ್ಸಾಂನಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತ ಉಂಟಾಗಿದ್ದು, ರಾಜ್ಯದ 20 ಜಿಲ್ಲೆಗಳಲ್ಲಿ ಸುಮಾರು 1.97 ಲಕ್ಷ ಜನರು ಪ್ರಸ್ತುತ ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, 46 ಕಂದಾಯ ವೃತ್ತಗಳ ವ್ಯಾಪ್ತಿಯ 652 ಗ್ರಾಮಗಳು ಪ್ರವಾಹದ ಈ ಅಲೆಯಿಂದ ಹಾನಿಗೊಳಗಾಗಿದ್ದು,16,645.61 ಹೆಕ್ಟೇರ್ ಬೆಳೆಗಳು ಮುಳುಗಿ ನಾಶವಾಗಿದೆ. ಕ್ಯಾಚಾರ್ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಸೇರಿದಂತೆ ಮೂವರು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದೆ.
ಇನ್ನು ಜಿಲ್ಲಾಡಳಿತ 55 ಪರಿಹಾರ ಶಿಬಿರಗಳನ್ನು ಮತ್ತು 12 ವಿತರಣಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಇಲ್ಲಿ 32,959 ಪ್ರವಾಹ ಪೀಡಿತ ಜನರು ಆಶ್ರಯ ಪಡೆಯುತ್ತಿದ್ದಾರೆ.
ಸರ್ಕಾರವು ಅಸ್ಸಾಂನಲ್ಲಿ ಭಾರತೀಯ ಸೇನೆ, ಅರೆಸೇನಾ ಪಡೆಗಳು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಎಸ್ಡಿಆರ್ಎಫ್, ನಾಗರಿಕ ಆಡಳಿತ ಮತ್ತು ತರಬೇತಿ ಪಡೆದ ಸ್ವಯಂಸೇವಕರನ್ನು ಸ್ಥಳಾಂತರಿಸುವಿಕೆ ಮತ್ತು ಪರಿಹಾರ ಕ್ರಮಗಳಿಗಾಗಿ ನಿಯೋಜಿಸಿದೆ.