ವಾರಾಣಸಿ, ಮೇ 17 (DaijiworldNews/MS): ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷೆಯ ಸಂದರ್ಭ ಹಿಂದೂ ಪರ ವಕೀಲರು ಕೊಳದಲ್ಲಿ ಶಿವಲಿಂಗ ಕಂಡುಬಂದಿದೆ ಎಂದು ಹೇಳಿದ್ದು, ಆದರೆ ಇದನ್ನು ಮಸೀದಿಯ ಆಡಳಿತ ಮಂಡಳಿ ತಳ್ಳಿಹಾಕಿದೆ. ಕೊಳದಲ್ಲಿ ಶಿವಲಿಂಗ ಪತ್ತೆಯಾಗಿಲ್ಲ. ಅಲ್ಲಿರುವುದು ಕೇವಲ ಕಾರಂಜಿ ( ಫೌಂಟನ್) ಇದನ್ನೇ ಅವರು ಶಿವಲಿಂಗ ಎಂದು ಅಂದುಕೊಂಡಿದ್ದಾರೆ ಎಂದು ಹೇಳಿದೆ. ಹಾಗೆಯೇ, ಕೊಳಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದ್ದನ್ನು ವಿರೋಧಿಸಿದ್ದಾರೆ.
ಇನ್ನೊಂದೆಡೆ ಇದು ಕಾರಂಜಿ, 'ಶಿವಲಿಂಗ' ಅಲ್ಲ. ಪ್ರತಿ ಮಸೀದಿಯಲ್ಲಿ ಈ ಕಾರಂಜಿ ಇದೆ. ನ್ಯಾಯಾಲಯದ ಆಯುಕ್ತರು ಏಕೆ ಹಕ್ಕು ಮಂಡಿಸಲಿಲ್ಲ? ಸ್ಥಳವನ್ನು ಸೀಲಿಂಗ್ ಮಾಡುವ ಆದೇಶವು 1991 ರ ಕಾಯಿದೆಯ ಉಲ್ಲಂಘನೆಯಾಗಿದೆ" ಎಂದು ಎಐಎಂಐಎಂ ಮುಖ್ಯಸ್ಥ ಎ ಒವೈಸಿ ಹೇಳಿದ್ದಾರೆ.
ಮೂರು ದಿನಗಳ ಜ್ಞಾನವಾಪಿ ಮಸೀದಿ ಸಮೀಕ್ಷೆ ಸೋಮವಾರ ಮುಕ್ತಾಯಗೊಂಡ ನಂತರ, ಹಿಂದೂ ಪರ ವಕೀಲರು ಮಸೀದಿ ಸಂಕೀರ್ಣದ ವಝುಖಾನಾ ಅಥವಾ ಜಲಾಶಯದಲ್ಲಿ ಶಿವಲಿಂಗ ಕಂಡುಬಂದಿದೆ ಎಂದು ಹೇಳಿದ್ದು ಈ ಕೊಳಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಮಸೀದಿ ಒಳಗಡೆ ಶಿವಲಿಂಗ ಪತ್ತೆಯಾಗಿದೆ ಎಂಬ ವಕೀಲರ ಹೇಳಿಕೆ ದೇಶಾದದ್ಯಾಂತ ಸಂಚಲನಕ್ಕೆ ಕಾರಣವಾಗಿದೆ.
ಬಾಬರಿ ಮಸೀದಿಯ ನಂತರ ಮುಸ್ಲಿಮರು ಮತ್ತೊಂದು ಮಸೀದಿಯನ್ನು ಕಳೆದುಕೊಳ್ಳಲು ಸಿದ್ಧರಿಲ್ಲ ಎಂದು ಓವೈಸಿ ಹೇಳಿದ್ದಾರೆ. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, "ನೀವು ಎಷ್ಟೇ ಸತ್ಯವನ್ನು ಮುಚ್ಚಿಟ್ಟರೂ ಮುಂದೊಂದು ದಿನ ಅದು ಹೊರಬರುತ್ತದೆ, ಸತ್ಯ ಹಿ ಶಿವ ಹೈ" ಎಂದು ಟ್ವೀಟ್ ಮಾಡಿದ್ದಾರೆ.