ಬೆಂಗಳೂರು, ಮೇ 16 (DaijiworldNews/DB): ಬಸವರಾಜ ಹೊರಟ್ಟಿ ಅವರು ವಿಧಾನ ಪರಿಷತ್ ಸಭಾಪತಿ ಹಾಗೂ ಪರಿಷತ್ ಸದಸ್ಯತ್ವಕ್ಕೆ ಸೋಮವಾರ ರಾಜೀನಾಮೆ ಘೋಷಣೆ ಮಾಡಿದ್ದಾರೆ.
ವಿಧಾನಸೌಧದ ಸಭಾಪತಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದರು.
ಬದಲಾವಣೆ ಬಗ್ಗೆ ನೋವಿದೆ. ಕಳೆದ 22 ವರ್ಷಗಳಿಂದ ಜೆಡಿಎಸ್ನಲ್ಲಿದ್ದೇನೆ. ದೇವೇಗೌಡರ ಬಗ್ಗೆ ನನಗೆ ಯಾವುದೇ ಅಸಮಾಧಾನ ಇಲ್ಲ. ಅವರ ಸಹಕಾರ ಸ್ಮರಣೀಯ. ಅವರದೇ ಕುಟುಂಬ ಸದಸ್ಯನಂತೆ ನನ್ನನ್ನು ಬೆಳೆಸಿದ್ದಾರೆ. ಅವರ ಬಳಿ ತೆರಳಿ ಮಾತನಾಡುವುದಕ್ಕೆ ಧೈರ್ಯವಿಲ್ಲದ ಕಾರಣ ಅವರಿಗೆ ಪತ್ರ ಬರೆದು ರಾಜೀನಾಮೆ ವಿಷಯ ತಿಳಿಸಿದ್ದೇನೆ ಎಂದರು.
ಈಗಿನ ರಾಜಕೀಯ ಪರಿಸ್ಥಿತಿ ನೋಡಿದರೆ ಈ ಕ್ಷೇತ್ರದಲ್ಲಿ ಇರುವುದು ಸರಿಯಾದ ಆಯ್ಕೆಯಲ್ಲ ಎನಿಸುತ್ತದೆ. ಜನ ನನ್ನನ್ನು ಏಳು ಬಾರಿ ಆಯ್ಕೆ ಮಾಡಿ ಕಳುಹಿಸಿದ್ದಾರೆ. ಈ ರೀತಿ ಬೇರೆ ಯಾರನ್ನೂ ದೇಶದಲ್ಲಿ ಆಯ್ಕೆ ಮಾಡಿದ್ದಿಲ್ಲ. ಅದಕ್ಕಾಗಿ ಶಿಕ್ಷಕರಿಗೆ, ಜನರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದ ಅವರು, ಶಿಕ್ಷಕರ ಕಷ್ಟಕ್ಕೆ ಸ್ಪಂದಿಸಿದ ತೃಪ್ತಿಯಿದೆ ಎಂದರು.
ಶಿಕ್ಷಕರ ಒತ್ತಾಯದಿಂದಾಗಿ ನಾನು ಬೇರೆ ನಿರ್ಧಾರ ತೆಗೆದುಕೊಂಡಿದ್ದೇನೆ. ಪಕ್ಷ ಬದಲಾವಣೆಯೂ ನನಗೆ ಅನಿವಾರ್ಯವಾಗಿದೆ. ಆದರೆ ಇದು ಅಧಿಕಾರಕ್ಕಾಗಿ ಅಲ್ಲ. ಯಾವ ಪಕ್ಷದಿಂದ ಸ್ಪರ್ಧಿಸಿದರೂ ಎಂಎಲ್ಸಿ ಆಗಬಲ್ಲೆ ಎಂಬ ಧೈರ್ಯ ನನಗಿದೆ ಎಂದು ಹೊರಟಿ ತಿಳಿಸಿದರು.
ಇನ್ನು ಬಸವರಾಜ ಹೊರಟ್ಟಿ ಅವರು ಬಿಜೆಪಿ ಸೇರ್ಪಡೆಯಾಗಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ನಾಳೆಯೇ ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ.