ವಾರಣಾಸಿ, ಮೇ 16 (DaijiworldNews/DB): ನ್ಯಾಯಾಲಯದ ಆದೇಶದಂತೆ ನಡೆದ ಜ್ಞಾನವಾಪಿ ಮಸೀದಿ ಸಂಕೀರ್ಣದ ವೀಡಿಯೊಗ್ರಫಿ ಸಮೀಕ್ಷೆಯ ವೇಳೆ ಮಸೀದಿಯ ಬಾವಿಯೊಳಗೆ ಶಿವಲಿಂಗ ಪತ್ತೆಯಾಗಿದೆ.
ಮಸೀದಿ ಸಂಕೀರ್ಣದ ವೀಡಿಯೊಗ್ರಫಿ ಸಮೀಕ್ಷೆಯು ಸೋಮವಾರ ಪೂರ್ಣಗೊಂಡಿದೆ. ಸಮೀಕ್ಷೆ ವೇಳೆ ಬಾವಿಯೊಳಗೆ ಶಿವಲಿಂಗ ಪತ್ತೆಯಾಗಿದ್ದು, 12 ಅಡಿ 8 ಇಂಚು ವ್ಯಾಸವನ್ನು ಹೊಂದಿದೆ. ನಂದಿಗೆ ಮುಖ ಮಾಡಿರುವ ಶಿವಲಿಂಗ ಇದಾಗಿದೆ ಎಂದು ಹಿಂದೂ ಪರ ವಕೀಲ ಮದನ್ ಮೋಹನ್ ಯಾದವ್ ಹೇಳಿದ್ದಾರೆ. ಶಿವಲಿಂಗ ರಕ್ಷಣೆ ಅಗತ್ಯವಾಗಿದೆ. ಹೀಗಾಗಿ ಸಿವಿಲ್ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ವಕೀಲ ವಿಷ್ಣು ಜೈನ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಸಮೀಕ್ಷೆ ಹಿನ್ನೆಲೆಯಲ್ಲಿ ನ್ಯಾಯಾಲಯವು ಸಮಿತಿಯೊಂದನ್ನು ನೇಮಿಸಿತ್ತು. ಮಸೀದಿ ಆವರಣದಲ್ಲಿ ಬಿಗಿ ಭದ್ರತೆ ಏರ್ಪಡೆಸಲಾಗಿತ್ತು. ಶನಿವಾರ, ಭಾನುವಾರ ಮತ್ತು ಸೋಮವಾರ ಮಸೀದಿ ಸಂಕೀರ್ಣ ಸಮೀಕ್ಷೆ ಕಾರ್ಯ ನಡೆದಿದ್ದು, ಭಾನುವಾರ ಶೇ. 65ರಷ್ಟು ಪೂರ್ಣಗೊಂಡಿತ್ತು. ಸೋಮವಾರ ಮಸೀದಿಯ ಆವರಣ, ಮಸೀದಿಯ ಮೇಲಿರುವ ಮೂರು ಗುಮ್ಮಟಗಳ ಸಮೀಕ್ಷೆ ಕಾರ್ಯ ನಡೆದಿತ್ತು.
ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯಲ್ಲಿ ಹಿಂದೂ ದೇವರುಗಳ ಪೂಜೆಯ ಚಿಹ್ನೆಗಳಿವೆ ಮತ್ತು ಅಲ್ಲಿ ಪೂಜೆಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಹಿಂದೂ ಸಮುದಾಯದವರು ಕೋರ್ಟ್ ಮೊರೆ ಹೋಗಿದ್ದರು. ಹೀಗಾಗಿ ನ್ಯಾಯಾಲಯವರು ಮಸೀದಿ ರಚನೆ ಬಗ್ಗೆ ತನಿಖೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್ಐ) ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಸಮೀಕ್ಷೆ ನಡೆಯುತ್ತಿದೆ.