ಮುಂಬೈ, ಮೇ 16 (DaijiworldNews/DB): ಕುಡುಕ ಪ್ರಯಾಣಿಕನಿಂದಾಗಿ ವಿಮಾನ ಸಂಚಾರದ ಮಾರ್ಗವನ್ನೇ ಬದಲಿಸಬೇಕಾದ ಘಟನೆ ಭಾನುವಾರ ತಡರಾತ್ರಿ ಬೆಂಗಳೂರು-ಕತಾರ್ ವಿಮಾನದಲ್ಲಿ ನಡೆದಿದೆ.
ಬೆಂಗಳೂರಿನಿಂದ ಕತಾರ್ಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನೊಬ್ಬ ಅತಿಯಾಗಿ ಮದ್ಯ ಸೇವನೆ ಮಾಡಿದ್ದ. ಅಲ್ಲದೆ, ಗಗನಸಖಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಮದ್ಯ ಕೊಡುವಂತೆ ಒತ್ತಾಯಿಸಿದ್ದಾನೆ. ಸಹ ಪ್ರಯಾಣಿಕರು ಆತನನ್ನು ಸರಿದಾರಿಗೆ ತರಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಆತನ ದುರ್ವರ್ತನೆ ಮಿತಿ ಮೀರಿದ ಹಿನ್ನೆಲೆಯಲ್ಲಿ ವಿಮಾನವನ್ನೇ ನಿಲ್ಲಿಸಬೇಕಾಗಿ ಬಂತು. ಬೆಂಗಳೂರಿನಿಂದ ಕತಾರ್ನ ದೋಹಾಕ್ಕೆ ನೇರವಾಗಿ ಪ್ರಯಾಣಿಸಬೇಕಾದ ವಿಮಾನವು ಕುಡುಕ ಪ್ರಯಾಣಿಕನ ಉಪಟಳದಿಂದಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಬೇಕಾಗಿ ಬಂತು.
ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನ ನಿಂತ ಕೂಡಲೇ ಪೊಲೀಸರು ಕುಡುಕ ಪ್ರಯಾಣಿಕನನ್ನು ಬಂಧಿಸಿ ದೂರು ದಾಖಲಿಸಿಕೊಂಡಿದ್ದಾರೆ. ಪ್ರಯಾಣಿಕನನ್ನು ಮೊಹಮ್ಮದ್ ಸರ್ಫೂದ್ದೀನ್ ಎಂದು ಗುರುತಿಸಲಾಗಿದೆ.