ಕಲಬುರಗಿ, ಮೇ 16 (DaijiworldNews/DB): ಆರೆಸ್ಸೆಸ್ ಮುಖ್ಯಸ್ಥ ಕೇಶವ ಬಲಿರಾಮ ಹೆಡಗೆವಾರ್ ರಾಷ್ಟ್ರವಾದಿ. ಅವರ ಭಾಷಣವನ್ನು ರಾಜ್ಯದ ಪಠ್ಯಪುಸ್ತಕದಲ್ಲಿ ಅಳವಡಿಕೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ರಾಷ್ಟ್ರೀಯ ವಿಚಾರಧಾರೆಗಳನ್ನು ಮುಚ್ಚಿಡುವ ಕೆಲಸವನ್ನು ಕಾಂಗ್ರೆಸ್ ಹಾಗೂ ಎಡಪಂಥೀಯರು ನಿರಂತರವಾಗಿ ಹಿಂದೆ ಮಾಡಿದ್ದರು. ಆದರೆ ಪ್ರಸ್ತುತ ಅವರು ಮುಚ್ಚಿಟ್ಟದ್ದನ್ನು ನಾವು ಮಕ್ಕಳಿಗೆ ಕಲಿಸಿಕೊಡುತ್ತಿದ್ದೇವೆ. ರಾಷ್ಟ್ರವಾದದ ತತ್ವ ಮತ್ತು ಚಿಂತನೆಯನ್ನು ಹೊಂದಿರುವ ಬಿಜೆಪಿ ಮಕ್ಕಳಿಗೆ ರಾಷ್ಟ್ರವಾದವನ್ನೇ ಕಲಿಸುತ್ತದೆ ಎಂದರು.
ತ್ರಿಪುರಾದಂತೆ ಕರ್ನಾಟಕದಲ್ಲಿಯೂ ಮುಖ್ಯಮಂತ್ರಿ ಬದಲಾವಣೆಯಾಗಲಿದೆಯೇ ಎಂಬ ಪ್ರಶ್ನೆಗೆ, ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ ಮುಂದಿನ ಚುನಾವಣೆಯನ್ನು ಎದುರಿಸಲಿದ್ದೇವೆ. ಇದರ ಬಗ್ಗೆ ಗೊಂದಲ ಅನಗತ್ಯ. ಸಂಪುಟ ವಿಸ್ತರಣೆಯ ವಿಚಾರ ಹೈಕಮಾಂಡ್ ಮತ್ತು ಸಿಎಂಗೆ ಬಿಟ್ಟದ್ದಾಗಿದೆ ಎಂದು ಪ್ರತಿಕ್ರಿಯಿಸಿದರು.
ಪಿಎಸ್ಐ ಅಕ್ರಮ ನೇಮಕಾತಿ ವಿಚಾರದಲ್ಲಿ ಈವರೆಗೆ 200ಕ್ಕೂ ಹೆಚ್ಚು ಮಂದಿಯ ವಿಚಾರಣೆ ನಡೆದಿದೆ. 40 ಮಂದಿಯನ್ನು ಬಂಧಿಸಲಾಗಿದೆ. ತನಿಖೆ ಬಗ್ಗೆ ವಿರೋಧ ಪಕ್ಷದವರಿಗೆ ಅಸಮಾಧಾನ ಇದ್ದಲ್ಲಿ ಅವರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಿ ಎಂದವರು ಇದೇ ವೇಳೆ ತಿಳಿಸಿದರು.