ಡೆಹರಾಡೂನ್, ಮೇ 16 (DaijiworldNews/DB): ಉತ್ತರಾಖಂಡಕ್ಕೆ ಚಾರ್ ಧಾಮ್ ಯಾತ್ರೆ ಕೈಗೊಂಡಿರುವ ಯಾತ್ರಾರ್ಥಿಗಳ ಪೈಕಿ ಈವರೆಗೆ 39 ಮಂದಿ ಮೃತಪಟ್ಟಿದ್ದಾರೆ ಎನ್ನುವ ಆಘಾತಕಾರಿ ಅಂಶ ಹೊರ ಬಿದ್ದಿದೆ.
ಸಾಂದರ್ಭಿಕ ಚಿತ್ರ
ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ, ಮೌಂಟೇನ್ ಸಿಕ್ನೆಸ್ ಕಾರಣದಿಂದಾಗಿ ಸಾವು ಸಂಭವಿಸುತ್ತಿದೆ ಎನ್ನಲಾಗಿದೆ. ಮೇ 3ರಿಂದ ಚಾರ್ ಧಾಮ್ ಯಾತ್ರೆ ಆರಂಭಗೊಂಡಿದೆ. ಯಾತ್ರೆ ಆರಂಭಗೊಂಡ ಎರಡೇ ವಾರದಲ್ಲಿ 39 ಮಂದಿ ಸಾವನ್ನಪ್ಪಿರುವುದು ಆಘಾತಕಾರಿಯಾಗಿದೆ. 18 ಮಂದಿ ಚಾರಣದ ಸಮಯದಲ್ಲೇ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದರು. ದೈಹಿಕವಾಗಿ ಸದೃಢವಾಗಿಲ್ಲದಿದ್ದರೆ ಯಾತ್ರೆಗೆ ಬರಬೇಡಿ ಎಂದು ಭಕ್ತಾದಿಗಳಿಗೆ ಸೂಚನೆ ನೀಡಲಾಗಿತ್ತು ಎಂದು ಆರೋಗ್ಯ ಇಲಾಖೆಯ ಡಿಜಿ ಡಾ. ಶೈಲಜಾ ಭಟ್ ತಿಳಿಸಿದ್ದಾರೆ.
ಕೊರೊನಾ ಕಾರಣದಿಂದಾಗಿ ಕಳೆದೆರಡು ವರ್ಷಗಳಿಂದ ಚಾರ್ದಾಮ್ ಯಾತ್ರೆ ನಿರ್ಬಂಧಿಸಲಾಗಿತ್ತು. ಈ ವೇಳೆ ಯಾತ್ರಾರ್ಥಿಗಳಿಗೆ ಯಾತ್ರೆಯನ್ನು ಮುಕ್ತಗೊಳಿಸಲಾಗಿತ್ತು. ಹೀಗಾಗಿ ಯಾತ್ರೆ ಕೈಗೊಳ್ಳುವವರ ಸಂಖ್ಯೆಯೂ ಹೆಚ್ಚಿದೆ.