ಕಾಶ್ಮೀರ, , ಮೇ 16 (DaijiworldNews/DB): 'ಕಾಶ್ಮೀರ ಬಿಟ್ಟು ತೊಲಗಿ, ಇಲ್ಲದಿದ್ದರೆ ಹೆಣವಾಗುವಿರಿ' ಎಂದು ಲಶ್ಕರೆ ಇಸ್ಲಾಮ್ ಭಯೋತ್ಪಾದಕ ಸಂಘಟನೆಯು ಕಾಶ್ಮೀರಿ ಪಂಡಿತರಿಗೆ ಕೊಲೆ ಬೆದರಿಕೆ ಹಾಕಿದ ಘಟನೆ ಕಾಶ್ಮೀರದಲ್ಲಿ ನಡೆದಿದೆ.
ಜಮ್ಮು ಮತ್ತು ಕಾಶ್ಮೀರದ ಹವಾಲದ ನಿರಾಶ್ರಿತರ ಕಾಲೊನಿಯ ಅಧ್ಯಕ್ಷರಿಗೆ ಸಂಘಟನೆಯು ಪತ್ರ ಬರೆದಿದ್ದು, ಕಾಶ್ಮೀರಿ ಪಂಡಿತರೇ ಪುಲ್ವಾಮಾ ಪ್ರದೇಶವನ್ನು ಬಿಟ್ಟು ಹೊರಡಿ. ಇಲ್ಲದಿದ್ದರೆ ಕೊಲೆಯಾಗುವಿರಿ ಎಂದು ಬೆದರಿಕೆ ಹಾಕಿದೆ. ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರಿ ಅಧಿಕಾರಿ ರಾಹುಲ್ ಭಟ್ ಅವರನ್ನು ಕೊಲೆ ಮಾಡಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಕಾಶ್ಮೀರಿ ಪಂಡಿತರು ಪ್ರತಿಭಟನೆಯಲ್ಲಿ ತೊಡಗಿರುವ ಬೆನ್ನಲ್ಲೇ ಭಯೋತ್ಪಾದಕ ಸಂಘಟನೆಯಿಂದ ಈ ಬೆದರಿಕೆ ಬಂದಿದೆ. ಪತ್ರಕ್ಕೆ ಲಶ್ಕರೆ ಇಸ್ಲಾಮ್ ಕಮಾಂಡರ್ ಸಹಿ ಹಾಕಿದ್ದಾನೆ. ಅಲ್ಲದೆ ವಲಸಿಗರು ಮತ್ತು ಆರೆಸ್ಸೆಸ್ ಏಜೆಂಟರು ಕೂಡಾ ಕಾಶ್ಮೀರ ಬಿಟ್ಟು ತೊಲಗದಿದ್ದರೆ ಕೊಲೆಯಾಗಲು ಸಿದ್ದರಾಗಿರಿ ಎಂದು ಅದೇ ಪತ್ರದಲ್ಲಿ ಬರೆಯಲಾಗಿದೆ. ಕಾಶ್ಮೀರಿ ಮುಸ್ಲಿಮರನ್ನು ಕೊಂದು ಕಾಶ್ಮೀರವನ್ನು ಮತ್ತೊಂದು ಇಸ್ರೇಲ್ ಮಾಡಲು ಬಿಡಲಾರೆವು. ನಿಮಗೆ ಇಲ್ಲಿ ಜಾಗವಿಲ್ಲ ಎಂದೂ ಬರೆಯಲಾಗಿದೆ.
ಮೇ 12ರಂದು ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯಲ್ಲಿ ಸರ್ಕಾರಿ ಅಧಿಕಾರಿ, ಕಾಶ್ಮೀರಿ ಪಂಡಿತ ರಾಹುಲ್ ಭಟ್ ಅವರನ್ನು ಭಯೋತ್ಪಾದಕ ಸಂಘಟನೆ ಲಶ್ಕರೆ ತೊಯ್ಬಾ ಕೊಲೆ ಮಾಡಿತ್ತು. ಇದರಿಂದ ಸಿಟ್ಟಿಗೆದ್ದ ಕಾಶ್ಮೀರಿ ಪಂಡಿತರು ರಾಜ್ಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.