ಡಿಸ್ಪುರ್, ಮೇ 16 (DaijiworldNews/DB): ಭಾರೀ ಮಳೆಯಿಂದಾಗಿ ಅಸ್ಸಾಂನಲ್ಲಿ ಚಲಿಸಲಾರದೆ ಹಳಿಯಲ್ಲೇ ರೈಲು ಸಿಕ್ಕಿ ಹಾಕಿಕೊಂಡ ಪರಿಣಾಮ ರೈಲಿನೊಳಗಿದ್ದ ಪ್ರಯಾಣಿಕರನ್ನು ಭಾರತೀಯ ವಾಯುಪಡೆ ರಕ್ಷಿಸಿದೆ.
ಸಿಲ್ಚಾರ್-ಗುವಾಹಟಿ ಎಕ್ಸ್ಪ್ರೆಸ್ನ ರೈಲು ಭಾರೀ ಮಳೆಯಿಂದಾಗಿ ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸಲಾಗದೆ ಕ್ಯಾಚಾರ್ ಪ್ರದೇಶದಲ್ಲಿ ಹಲವು ಗಂಟೆಗಳ ಕಾಲ ಹಳಿಯಲ್ಲೇ ಸಿಲುಕಿತ್ತು. ಹೀಗಾಗಿ ರೈಲಿನಲ್ಲಿದ್ದ ಪ್ರಯಾಣಿಕರು ಸಂಕಷ್ಟಕ್ಕೊಳಗಾದರು. ಬಳಿಕ ಕೂಡಲೇ ಕಾರ್ಯಪ್ರವೃತ್ತರಾದ ವಾಯುಪಡೆಯು 119 ಪ್ರಯಾಣಿಕರನ್ನು ರಕ್ಷಿಸಿದೆ. ಸಿಲ್ಚಾರ್-ಗುವಾಹಟಿ ರೈಲು ಕ್ಯಾಚಾರ್ ಪ್ರದೇಶದಲ್ಲಿ ಮಳೆಯಿಂದಾಗಿ ಸಿಲುಕಿಕೊಂಡಿತ್ತು.
ಇನ್ನು ಏಕಾಏಕಿ ಸುರಿದ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಅಸ್ಸಾಂನ ಹಲವೆಡೆ ಭೂಕುಸಿತಗೊಂಡಿದೆ. ಆಸ್ತಿಪಾಸ್ತಿಗೂ ಹಾನಿ ಉಂಟಾಗಿದ್ದು, ಬೇರೆ ರಾಜ್ಯಗಳಿಂದ ರೈಲು ಮತ್ತು ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ನ್ಯೂ ಕುಂಜಂಗ್, ಫಿಯಾಂಗ್ಪುಯಿ, ಮೌಲ್ಹೋಯ್, ನಮ್ಝುರಾಂಗ್, ಸೌತ್ ಬಾಗೇಟರ್, ಮಹಾದೇವ್ ತಿಲ್ಲಾ, ಕಲಿಬರಿ, ನಾರ್ತ್ ಬಾಗೇಟರ್, ಜಿಯಾನ್ ಮತ್ತು ಲೋಡಿ ಪಂಗ್ಮೌಲ್ ಗ್ರಾಮಗಳಲ್ಲಿ ಭೂಕುಸಿತ ಉಂಟಾಗಿದ್ದು, ಸುಮಾರು 80ಕ್ಕೂ ಹೆಚ್ಚು ಮನೆಗಳಿಗೆ ತೀವ್ರ ಹಾನಿ ಉಂಟಾಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಭೂಕುಸಿತದಿಂದಾಗಿ ಜಟಿಂಗ-ಹರಂಗಜಾವೋ ಮತ್ತು ಮಾಹುರ್-ಫೈಡಿಂಗ್ ರೈಲು ಮಾರ್ಗ ಸ್ಥಗಿತಗೊಂಡಿದೆ. ಪ್ರವಾಹದಿಂದಾಗಿ ಅಸ್ಸಾಂನ ಐದು ಜಿಲ್ಲೆಗಳಲ್ಲಿ ಸುಮಾರು 25,000 ಜನರು ಸಂತ್ರಸ್ತರಾಗಿದ್ದಾರೆ. ಸುಮಾರು 10321.44 ಹೆಕ್ಟೇರ್ ಕೃಷಿ ಭೂಮಿ ನೀರಿನಲ್ಲಿ ಮುಳುಗಿದೆ ಎನ್ನಲಾಗಿದೆ. ಸೇನೆ, ಅರೆ ಮಿಲಿಟರಿ ಪಡೆಗಳು, ಎಸ್ಡಿಆರ್ಎಫ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ನಿರತವಾಗಿವೆ. ರಸ್ತೆ, ಸೇತುವೆ, ನೀರಾವರಿ ಕಾಲುವೆ, ರೈಲ್ವೇ ಹಳಿ ಸೇರಿದಂತೆ ಎಲ್ಲೆಡೆಯೂ ಪ್ರವಾಹದ ನೀರು ತುಂಬಿಕೊಂಡಿದ್ದು, ಜನವಾಸವೇ ದುಸ್ಥರವಾದಂತಾಗಿದೆ.