ಬೆಂಗಳೂರು, ಮೇ 16 (DaijiworldNews/DB): ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ತಪ್ಪು ಎಸಗಿದವರಿಂದಾಗಿ ಪ್ರಾಮಾಣಿಕ ಅಭ್ಯರ್ಥಿಗಳೂ ತೊಂದರೆ ಎದುರಿಸುವಂತಾಗಿದೆ. ಆದರೆ ಪ್ರಾಮಾಣಿಕರಿಗೆ ನ್ಯಾಯ ಸಿಗದ ಹಿನ್ನೆಲೆಯಲ್ಲಿ ನೊಂದ ಅಭ್ಯರ್ಥಿಗಳು ಪ್ರಧಾನಿಗೆ ರಕ್ತದಲ್ಲಿ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಇದೀಗ ವೈರಲ್ ಆಗಿದೆ. ನ್ಯಾಯ ದೊರಕದೇ ಇದ್ದಲ್ಲಿ ಉಗ್ರ ಮತ್ತು ನಕ್ಸಲ್ ಸಂಘಟನೆ ಸೇರುವುದಾಗಿ ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಸುಮಾರು ಎರಡು ಪುಟಗಳಿರುವ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದಿದ್ದಾರೆ. ಎಂಟು ಮಂದಿ ಸೇರಿ ಈ ಪತ್ರ ಬರೆದಿರುವುದಾಗಿ ಉಲ್ಲೇಖಿಸಲಾಗಿದೆ. ತಪ್ಪು ಮಾಡಿದವರನ್ನು ಶಿಕ್ಷಿಸಿ ಜೈಲಿಗಟ್ಟಿ. ಆದರೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಪಾಸಾದವರು ಅನಗತ್ಯ ತೊಂದರೆ ಎದುರಿಸುವಂತಾಗಿದೆ. ಈ ಅನ್ಯಾಯ ಸರಿಪಡಿಸುವಂತೆ ಎಷ್ಟೇ ಹೋರಾಟ ಮಾಡಿದರೂ ಸರ್ಕಾರ ಸೊಪ್ಪು ಹಾಕುತ್ತಿಲ್ಲ. ತತ್ಕ್ಷಣ ನಮಗೆ ನ್ಯಾಯ ಒದಗಿಸಬೇಕೆಂದು ಪತ್ರದಲ್ಲಿ ಹೇಳಲಾಗಿದೆ. ಈ ಪತ್ರವನ್ನು ರಕ್ತದಲ್ಲಿ ಬರೆಯಲಾಗಿದ್ದು, ಒಂದು ವೇಳೆ ನ್ಯಾಯ ಕೊಡಿಸದೇ ಇದ್ದಲ್ಲಿ ಮುಂದೆ ಟೆರರಿಸ್ಟ್ಗಳೊಂದಿಗೆ ನಾವು ಕೈ ಜೋಡಿಸುತ್ತೇವೆ ಎಂದು ಉಲ್ಲೇಖಿಸಲಾಗಿದೆ. ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳು ಹಣ ಇದ್ದವರಿಗೆ ಎಂಬ ವ್ಯವಸ್ಥೆ ಬಂದು ಬಿಟ್ಟಿದೆ. ಸರ್ಕಾರದ ಈ ವ್ಯವಸ್ಥೆಯಿಂದಾಗಿ ನಾವು ಮಾನಸಿಕವಾಗಿ ಸತ್ತಿದ್ದೇವೆ. ಇನ್ನು ಸರ್ಕಾರಿ ಹುದ್ದೆ ಪರೀಕ್ಷೆ ಬರೆಯುವುದಿಲ್ಲ. ಬದಲಾಗಿ ಟೆರರಿಸ್ಟ್, ನಕ್ಸಲೈಟ್ ಸಂಘಟನೆ ಜೊತೆ ಸೇರಲು ಇಚ್ಚಿಸಿದ್ದೇವೆ. ಅವರ ಬಳಿ ಹಣ ಪಡೆದ ಬಡ ಕುಟುಂಬಕ್ಕೆ ನಾವು ಸಹಾಯ ಮಾಡುತ್ತೇವೆ ಎಂದು ಎರಡು ಪುಟಗಳ ಪತ್ರದಲ್ಲಿ ಬರೆಯಲಾಗಿದೆ.
ಆದರೆ ಈ ಪತ್ರದಲ್ಲಿ ಯಾವುದೇ ಅಭ್ಯರ್ಥಿಗಳ ಹೆಸರು ನಮೂದಿಸಿಲ್ಲ. ಎಂಟು ಮಂದಿ ಇದ್ದೇವೆ. ನಾವೆಲ್ಲರೂ ಈ ನಿರ್ಧಾರ ಮಾಡಿದ್ದೇವೆ ಎಂದು ಬರೆಯಲಾಗಿದೆ. ನಿಜವಾಗಿಯೂ ಇದು ನೊಂದ ಅಭ್ಯರ್ಥಿಗಳೇ ಬರೆದಿರುವುದೇ ಅಥವಾ ಇತರರು ಈ ರೀತಿ ಬರೆದು ವೈರಲ್ ಮಾಡಿರುವುದೇ ಎಂಬುದು ಗೊತ್ತಾಗಿಲ್ಲ.